ಬಸ್ ವ್ಯವಸ್ಥೆಗೆ ಆಗ್ರಹಿಸಿ ಪ್ರಯಾಣಿಕರ ಆಕ್ರೋಶ

ಬಂಕಾಪುರ,ನ25 : ಗದಗ-ಬಂಕಾಪುರ-ಹಾವೇರಿ -ಹುಬ್ಬಳ್ಳಿ ಮಾರ್ಗದ ಬಸ್ ವ್ಯವಸ್ಥೆ ಸರಿಯಾದ ಸಮಯಕ್ಕೆ ಇಲ್ಲದೆ, ಒಂದೇ ಬಸ್‍ನಲ್ಲಿ ನೂರಾರು ಪ್ರಯಾಣಿಕರು ಪ್ರಯಾಣ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ದಿನನಿತ್ಯ ವಿದ್ಯಾರ್ಥಿಗಳು, ಪ್ರಯಾಣಿಕರು ಬಸ್ ವ್ಯವಸ್ಥೆ ಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಶಿಗ್ಗಾಂವ ತಾಲ್ಲೂಕಿನ ಬಂಕಾಪುರ ಪಟ್ಟಣದ ಸುತ್ತಮುತ್ತಲಿನ ಗ್ರಾಮದ ನೂರಾರು ಪ್ರಯಾಣಿಕರು ಕೆಲಸಕ್ಕಾಗಿ ಹಾಗೂ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಹಾವೇರಿ ನಗರಕ್ಕೆ ಪ್ರಯಾಣ ಮಾಡುತ್ತಾರೆ.
ಬೆಳಗಿನ ಜಾವದಿಂದಲೂ ನಿಲ್ದಾಣದಲ್ಲಿ ಬಸ್‍ಗಾಗಿ ವಿದ್ಯಾರ್ಥಿಗಳು ಕಾದು ಕುಳಿತಿರುತ್ತಾರೆ. ಗದಗ, ಸವಣೂರು, ಹಾವೇರಿ ಡಿಪೆÇೀ ವಾಹನಗಳು ಸರಿಯಾದ ಸಮಯಕ್ಕೆ ಬಾರದೆ ಇರೋದಕ್ಕೆ ಹಾಗೂ ಬಸ್ಸಿನ ಸಂಖ್ಯೆ ಕಡಿಮೆಯಾದ ಕಾರಣ ಪ್ರಯಾಣಿಕರು ಅನಿವಾರ್ಯವಾಗಿ ಪ್ರತಿದಿನ ಬಸ್ ಬಾಗಿಲಲ್ಲಿ ನೇತಾಡುತ್ತ ಸಂಚಾರ ಮಾಡುತ್ತಿದ್ದಾರೆ. ಬಸ್‍ಗಾಗಿ ಸಮಯಕ್ಕೆ ಸರಿಯಾಗಿ ಬಂದು ಕಾಯ್ದು ಕುಳಿತರೂ, ಬಸ್ ಇಲ್ಲದೆ ನಿಲ್ದಾಣದಲ್ಲಿ ಗಂಟೆ ಗಂಟಲೇ ಕಾದು ಕುಳಿದುಕೊಳ್ಳುವಂತಾಗಿದೆ ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ.
ಹಲವು ಬಾರಿ ಅವಘಡ : ಬಸ್ ನಿಲ್ದಾಣದಲ್ಲಿ ಬಾಗಿಲಿನಲ್ಲಿ ಜೋತು ಬಿದ್ದು ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ಆಯತಪ್ಪಿ ನೆಲಕ್ಕೆ ಬಿದ್ದಿರುವ ಉದಾಹರಣೆಗಳಿವೆ. ಪ್ರಯಾಣಿಕರಿಗೆ ವಿದ್ಯಾರ್ಥಿಗಳಿಗೆ ಪ್ರಯಾಣದ ಸಂದರ್ಭದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಹೊಣೆ ಯಾರು ? ಎಂದು ಪ್ರಯಾಣಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈಗಾಗಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಬಸ್ ವ್ಯವಸ್ಥೆಗಾಗಿ ಆಗ್ರಹ ಮಾಡಲಾಗಿದೆ. ಆದರೆ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಆದಷ್ಟು ಬೇಗ ಸಂಬಂಧ ಪಟ್ಟ ಅಧಿಕಾರಿಗಳು ಬೆಳಗಿನ ಜಾವ ಹಾಗೂ ಸಂಜೆ ಹೆಚ್ಚಿನ ಬಸ್ ವ್ಯವಸ್ಥೆ ಮಾಡಬೇಕು ಎಂಬುವುದು ನಮ್ಮ ಒತ್ತಾಯವಾಗಿದೆ ಎಂದು ಪ್ರಯಾಣಿಕರು ಪ್ರತಿಭಟಿಸಿದರು.

ಬಸ್ ಸಮಸ್ಯೆ ಇರುವುದರ ಬಗ್ಗೆ ಈಗಾಗಲೇ ನಮ್ಮ ಗಮನಕ್ಕೆ ಬಂದಿದೆ. ನಾಳೆಯಿಂದಲೇ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗುತ್ತದೆ. ಸಿಬ್ಬಂದಿಗಳ ಕೊರತೆಯಿಂದ ಬಸ್ಸಿನ ಸಮಸ್ಯೆ ಆಗುತ್ತಿದೆ.ಪ್ರಯಾಣಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಹಾವೇರಿ ಜಿಲ್ಲೆಯ ಡಿಪೆÇೀ ನಿಯಂತ್ರಣಾಧಿಕಾರಿಗಳು ತಿಳಿಸಿದರು.