ಬಸ್ ರದ್ದತಿ ಕೈಬಿಡಲು ಆಗ್ರಹ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು3: ಲಕ್ಷ್ಮೇಶ್ವರ ಘಟಕದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ಕಳೆದ ಅನೇಕ ವರ್ಷಗಳಿಂದ ಲಕ್ಷ್ಮೇಶ್ವರ ಕೊಪರ್ಗಾವ ಬಸ್ಸನ್ನು ಅಂತರ್ ರಾಜ್ಯ ಮಟ್ಟದಲ್ಲಿ ಏಕೈಕ ಸಾರಿಗೆ ವ್ಯವಸ್ಥೆಯಾಗಿ ಅನುಕೂಲ ಮಾಡಿತ್ತು.
ಆದರೆ ಕಳೆದ ನಾಲ್ಕು ಐದು ದಿನಗಳಿಂದ ಈ ಬಸ್ಸನ್ನು ಏಕಾಏಕಿ ರದ್ದುಗೊಳಿಸಿರುವುದರಿಂದ ಸಾಯಂಕಾಲ 6:45 ರ ನಂತರ ಹುಬ್ಬಳ್ಳಿಯ ತ್ತ ತೆರಳುತ್ತಿದ್ದ ಅನೇಕ ಉದ್ಯೋಗಿಗಳಿಗೆ ನೌಕರರಿಗೆ ರಾತ್ರಿ 9ರವರೆಗೂ ಬಸ್ ಇಲ್ಲದಿರುವುದರಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಘಟಕ ಸ್ಥಾಪನೆ ಆದಾಗಿನಿಂದಲೂ ಅನೇಕ ಷೆಡ್ಯೂಲ್ ಗಳು ರದ್ದಾಗಿ ಈಗ ಬೆರಣಿಕೆಯಷ್ಟು ಬಸ್ಸುಗಳು ಚಲಿಸುತ್ತಿದ್ದು ಇಡೀ ಘಟಕದಲ್ಲಿಯೇ ಏಕೈಕ ಅಂತರ್ ರಾಜ್ಯ ಸಂಪರ್ಕ ಕಲ್ಪಿಸುವ ಕೋಪರಗಾಂವ ಬಸ್ ರದ್ದತಿಯಿಂದ ಶಿರಡಿ ಪುಣೆ ಬೆಳಗಾವ್ ಇತರ ಕಡೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ದೊಡ್ಡ ಆಘಾತವಾಗಿದೆ.
ಈ ಕುರಿತು ನ್ಯಾಯವಾದಿ ಹಾಗೂ ಪುರಸಭೆ ಮಾಜಿ ಸದಸ್ಯ ರಾಮರಾವ್ ವೆರ್ಣೇಕರ್ ಅವರು ಹೇಳಿಕೆಯನ್ನು ನೀಡಿ ಲಕ್ಷ್ಮೇಶ್ವರ ಘಟಕದವರು ಜನರಿಗೆ ಅತ್ಯಂತ ಅನುಕೂಲಕರವಾಗಿದ್ದ ಸಾಯಂಕಾಲದ 6:45 ಕೊಪ್ಪರ್ಗಾವ್ ಬಸ್ಸನ್ನು ರದ್ದುಗೊಳಿಸಿರುವುದು ಅತ್ಯಂತ ದುರದೃಷ್ಟಕರ ಎಂದು ಹೇಳಿದ್ದಾರಲ್ಲದೆ ಮೊದಲೇ ಬಸ್ಸಿನ ಅವ್ಯವಸ್ಥೆಯಿಂದಾಗಿ ಹುಬ್ಬಳ್ಳಿ ತಲುಪಲು ಪ್ರಯಾಣಿಕರು ಹರಸಾಹಸ ಮಾಡಬೇಕಾಗಿದೆ ಈ ಬಸ್ಸಿನ ರದ್ದತಿಯಿಂದಾಗಿ ಸಾಯಂಕಾಲ ಹುಬ್ಬಳ್ಳಿ ಧಾರವಾಡ ಬೆಳಗಾವಿ ಹೋಗಲು ಯಾವುದೇ ಬಸ್ಸಿನ ವ್ಯವಸ್ಥೆ ಇಲ್ಲ ಲಕ್ಷ್ಮೇಶ್ವರ ಘಟಕದವರು ಮತ್ತು ಗದಗ್ ವಿಭಾಗೀಯ ನಿಯಂತ್ರಣಧಿಕಾರಿಗಳು ಕೂಡಲೇ ಬಸ್ಸನ್ನು ಪುನರಾರಂಭಿಸದಿದ್ದರೆ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಕೈಗೊಳ್ಳುವದಾಗಿ ಎಚ್ಚರಿಸಿದ್ದಾರೆ.
ಈ ಕುರಿತು ಲಕ್ಷ್ಮೇಶ್ವರ ಘಟಕದ ವ್ಯವಸ್ಥಾಪಕರಾದ ಸವಿತಾ ಆದಿ ಅವರು ಪ್ರತಿಕ್ರಿಯೆ ನೀಡಿ ಉಚಿತ ಸಾರಿಗೆ ವ್ಯವಸ್ಥೆಯ ನಂತರ ಸಾರ್ವಜನಿಕರಿಗೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಸಂಸ್ಥೆ ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಬಸ್ ಅನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ.