ಬಸ್ ಬಂದ್ ಪ್ರಯಾಣಿಕರ ಪರದಾಟ

ಬೆಂಗಳೂರು, ಏ. ೭- ೬ ವೇತನ ಆಯೋಗ ಶಿಫಾರಸ್ಸಿಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಸಾರಿಗೆ ನೌಕರರ ಸಂಘಟನೆಯ ಮಧ್ಯೆ ನಡೆದಿರುವ ಹಗ್ಗಾ-ಜಗ್ಗಾಟಕ್ಕೆ ಪ್ರಯಾಣಿಕರು ಹೈರಾಣುವಾಗುವಂತಾಗಿದೆ.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ೬ನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಖಡಾಖಂಡಿತವಾಗಿ ಹೇಳಿದ ಬೆನ್ನಲ್ಲೇ ಸಾರಿಗೆ ನೌಕರರು ಮುಷ್ಕರ ನಡೆಸಿರುವುದರಿಂದ ಬಸ್ ಸಂಚಾರವಿಲ್ಲದೆ ಜನರು ಪರದಾಡುವಂತಾಗಿದೆ.
ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಖಾಸಗಿ ಬಸ್‌ಗಳ ಸಂಚಾರಕ್ಕೆ ಸರ್ಕಾರ ವ್ಯವಸ್ಥೆ ಮಾಡಿದ್ದರೂ ಗೊಂದಲ ಉಂಟಾಗಿ ಪ್ರಯಾಣಿಕರು ಪರಿತಪಿಸುವಂತಾಯಿತು.
ಬಿಎಂಟಿಸಿ ಬಸ್‌ಗಳ ಸಂಚಾರವಿಲ್ಲದೆ ಕಛೇರಿಗೆ ತೆರಳಬೇಕಾದ ನೌಕರರು ಬಸ್ ಇಲ್ಲದೆ ಕೆಲವರು ಆಟೋ ಹಿಡಿದರೆ ಮತ್ತೆ ಕೆಲವರು ಕಾಲಿಗೆ ಬುದ್ಧಿ ಹೇಳುವಂತಾಯಿತು.
ಬಸ್ ಸಂಚಾರ ಸ್ಥಗಿತಗೊಳಿಸುವ ಬಗ್ಗೆ ಕಾರ್ಮಿಕ ಸಂಘಟನೆಗಳಲ್ಲೇ ಗೊಂದಲ ಉಂಟಾಯಿತು. ಬಸ್ ಮುಷ್ಕರಕ್ಕೆ ನೀಡಿದ್ದ ಕರೆಯನ್ನು ಲೆಕ್ಕಿಸದೆ ಬಸ್ ಓಡಿಸಲು ಮುಂದಾದ ಚಾಲಕನಿಗೆ ಸಾರ್ವಜನಿಕರು ಶಾಲು ಹೊದಿಸಿ ಸನ್ಮಾನಿಸಿದ್ದು ಕಂಡು ಬಂತು.
ಮುಷ್ಕರದ ಪರಿಣಾಮ ನಗರದಲ್ಲಿ ಬಿಎಂಟಿಸಿ ಬಸ್‌ಗಳು ರಸ್ತೆಗಿಳಿಯದ ಕಾರಣ ದಿನನಿತ್ಯ ಕೆಲಸ ಕಾರ್ಯಗಳಿಗೆ ಬಸ್‌ಗಳನ್ನೇ ನೆಚ್ಚಿಕೊಂಡ ಜನ ಬೇರೆ ವ್ಯವಸ್ಥೆ ಹುಡುಕಿಕೊಳ್ಳಲು ಪರದಾಡುತ್ತಿದ್ದಾರೆ.
ಬಸ್ ಸಂಚಾರ ಸ್ಥಗಿತದಿಂದ ನಗರದ ಮೆಜೆಸ್ಟಿಕ್ ಸ್ಯಾಟಲೈಟ್ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದು ಮೌನ ಆವರಿಸಿದೆ.
ಕೇವಲ ಬೆರಳೆಣಿಕೆಯಷ್ಟು ಅಂತರರಾಜ್ಯ ಬಸ್‌ಗಳು ಮಾತ್ರ ಓಡಾಟ ಆರಂಭಿಸಿವೆ. ಮೆಜೆಸ್ಟಿಕ್ ಬಸ್ ನಿಲ್ದಾಣವೂ ಖಾಲಿ ಖಾಲಿಯಾಗಿದ್ದು ಬೆಳಗ್ಗೆ ಬೇಗ ಬಂದರೆ ಬಸ್ ಸಿಗಬಹುದೆಂಬ ನಿರೀಕ್ಷೆಯಲ್ಲಿ ಆಗಮಿಸಿದ್ದ ಜನ ನಿರಾಶರಾಗಿದ್ದಾರೆ.
೭೦ ಲಕ್ಷ ಮಂದಿಗೆ ಸಂಕಷ್ಟ:
ನಗರದಲ್ಲಿ ೩೦ ಲಕ್ಷ ಪ್ರಯಾಣಿಕರು ಬಿಎಂಟಿಸಿ ಬಸ್‌ಗಳನ್ನು ಅವಲಂಬಿಸಿದ್ದರೆ ಕೆಎಸ್‌ಆರ್‌ಟಿಸಿ, ಈಶಾನ್ಯ, ನೈರುತ್ಯ ಸಾರಿಗೆಯ ಬಸ್‌ಗಳು ಸೇರಿ ೭೦ ಲಕ್ಷದಿಂದ ೮೦ ಲಕ್ಷ ಪ್ರಯಾಣಿಕರು ಬಸ್ ಸಂಚಾರ ಸ್ಥಗಿತದಿಂದ ತೊಂದರೆಗೆ ಸಿಲುಕಿದ್ದಾರೆ.
ನಗರದ ಬಸ್ ನಿಲ್ದಾಣದಲ್ಲಿ ಬಸ್‌ಗಳು ನಿಂತಲ್ಲೇ ನಿಂತಿದ್ದು, ಕೆಲ ಪ್ರಯಾಣಿಕರು ಬಸ್ ಹೊರಡುವುದನ್ನೇ ನಿರೀಕ್ಷಿಸುತ್ತಿರುವ ದೃಶ್ಯ ಕಂಡುಬಂದಿದೆ. ಕೆಲ ಕಾರ್ಮಿಕರು ಊರಿಗೆ ತೆರಳಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ಶಾಂತಿನಗರದ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳಿಗೆ ಜನರು ಮುಗಿಬಿದ್ದಿದ್ದಾರೆ. ಊರಿಗೆ ಹೋದರೆ ಸಾಕಪ್ಪಾ ಎಂಬ ಧಾವಂತದಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿರುವುದು ಕಂಡು ಬಂದಿತು.
ಕ್ಯಾಬ್‌ಗಳ ಮೊರೆ:
ಬಸ್ ನಿಲ್ದಾಣಗಳಿಗೆ ಬೇರೆ ಊರುಗಳಿಂದ ಬಂದ ಪ್ರಯಾಣಿಕರು ಊರಿಗೆ ತೆರಳಲು ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಿದೆ. ಬೆಂಗಳೂರು, ಕೋಲಾರ, ಮಂಡ್ಯ, ಹುಬ್ಬಳ್ಳಿ ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರಯಾಣಿಕರು ಖಾಸಗಿ ಬಸ್, ಆಟೋ, ಕ್ಯಾಬ್‌ಗಳ ಮೊರೆ ಹೋಗಿದ್ದಾರೆ.
ಪ್ರತಿನಿತ್ಯಕ್ಕೆ ಹೋಲಿಸಿದರೆ ಇಂದು ಪ್ರಯಾಣಿಕರ ಸಂಖ್ಯೆಯೂ ಇಳಿಮುಖವಾಗಿದೆ. ಅಂತೆಯೇ, ನಗರ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಯಶವಂತಪುರ, ಗೊರಗುಂಟೆ ಪಾಳ್ಯ, ಪೀಣ್ಯ ಸೇರಿದಂತೆ ಬಹುತೇಕ ಎಲ್ಲಾ ಭಾಗಗಳಲ್ಲೂ ಪ್ರಯಾಣಿಕರಿಗೆ ತೊಂದರೆಯಾಗಿದೆ.
ಕೊಪ್ಪಳ, ತುಮಕೂರು, ಹಾವೇರಿ, ಮಂಡ್ಯ, ಬಾಗಲಕೋಟೆ, ಚಿತ್ರದುರ್ಗ, ರಾಮನಗರ, ನೆಲಮಂಗಲ, ಯಾದಗಿರಿ, ಕೋಲಾರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಆಗಿದೆ.
ಖಾಸಗಿ ಬಸ್‌ಗಳು ಲಗ್ಗೆ:
ಬೀದರ್‌ನಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಶೇ.೪೦ರಷ್ಟು ಬಸ್ ಮಾತ್ರ ಸಂಚಾರ ಆರಂಭಿಸಿವೆ. ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎನ್ನುವುದು ನಿಶ್ಚಿತವಾಗುತ್ತಿದ್ದಂತೆಯೇ ಬೆಂಗಳೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಖಾಸಗಿ ಬಸ್‌ಗಳು ಲಗ್ಗೆ ಇಟ್ಟಿವೆ.
ಆರಂಭದಲ್ಲಿ ಒಂದೆರೆಡು ಬಿಎಂಟಿಸಿ ಬಸ್ ಕಣ್ಣಿಗೆ ಬಿದ್ದವಾದರೂ ಅದರಲ್ಲಿದ್ದ ಚಾಲಕರು ಹಾಗೂ ನಿರ್ವಾಹಕರು ನಮ್ಮ ಪಾಳಿ ಮುಗಿದಿದ್ದು ಬಸ್ ಅನ್ನು ಡಿಪೋಕ್ಕೆ ಬಿಟ್ಟು ಮನೆಗೆ ತೆರಳಲು ಬಂದಿದ್ದೇವೆ ಎಂದು ಹೇಳುವ ಮೂಲಕ ಇಂದು ಯಾರೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ.