ಬಸ್ ಪ್ರಯಾಣಿಕರಿಗೆ ಟಿಕೇಟ್ ವಿತರಿಸಿದ ಶಾಲಾ ವಿದ್ಯಾರ್ಥಿನಿ

ಅಫಜಲಪುರ:ಫೆ.5: ತಾಲೂಕಿನ ಘತ್ತರಗಾ ಸರ್ಕಾರಿ ಪ್ರೌಢ ಶಾಲೆಯ ಹಿಂಚಗೇರಾ ಹೊಸ ಬಡಾವಣೆಯ ಕು. ವಿದ್ಯಾ ಸಾದೇಪುರ ವಿದ್ಯಾರ್ಥಿನಿಯು ಇಂದು ಬೆಳಗ್ಗೆ ಶಾಲೆಗೆ ತೆರಳುವ ಸಮಯದಲ್ಲಿ ಅಫಜಲಪುರ ಮಾರ್ಗವಾಗಿ ಘತ್ತರಗಾ ಗ್ರಾಮಕ್ಕೆ ಹೋಗುವ ಸಾರಿಗೆ ಬಸ್ಸಿನಲ್ಲಿ ಎಲ್ಲ ಪ್ರಯಾಣಿಕರಿಗೆ ಟಿಕೇಟ್ ವಿತರಿಸುವ ಮೂಲಕ ಗಮನ ಸೆಳೆದಿದ್ದಾರೆ.

ವಿದ್ಯಾರ್ಥಿನಿಯು ತಾನು ಮುಂದೊಂದು ದಿನ ಸಾರಿಗೆ ಇಲಾಖೆಯಲ್ಲಿ ಸಾರ್ವಜನಿಕ ಸೇವೆ ಸಲ್ಲಿಸಬೇಕೆಂಬ ಮಹದಾಸೆ ಹೊಂದಿದ್ದು ಇಂದು ಬಸ್ ನಿರ್ವಾಹಕರಿಗೆ ಮನವಿ ಮಾಡಿಕೊಂಡು ಇಟಿಎಂ ಟಿಕೇಟ್ ಮಷಿನ್ ಪಡೆದು ಅದನ್ನು ಹೇಗೆ ನಿರ್ವಹಿಸಬೇಕೆಂಬ ಪ್ರಾಥಮಿಕ ಮಾಹಿತಿ ಪಡೆದು ಆಧಾರ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಉಚಿತ ಟಿಕೇಟ್ ಮತ್ತು ಪುರುಷ ಪ್ರಯಾಣಿಕರಿಗೆ ಬಸ್ ದರ ಪಡೆದು ಟಿಕೇಟ್ ವಿತರಿಸಿದ್ದಾರೆ. ತನಗೆ ಅವಕಾಶ ನೀಡಿದ ಬಸ್ ನಿರ್ವಾಹಕರಿಗೆ ಧನ್ಯವಾದ ಸಲ್ಲಿಸಿದ್ದು ವಿದ್ಯಾರ್ಥಿನಿ ಟಿಕೇಟ್ ನೀಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.