ಬಸ್ ಪಲ್ಟಿ ಪ್ರಯಾಣಿಕರು ಪಾರು

ಬೆಂಗಳೂರು,ಆ.೨೯- ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿ ವೋಲ್ವೋ ಬಸ್ ಪಲ್ಟಿಯಾಗಿ ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಪ್ಯಾಲೇಸ್ ಗುಟ್ಟಹಳ್ಳಿ ಫ್ಲೈಓವರ್ ಬಳಿ ನಡೆದಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಚ್‌ಎಸ್‌ಆರ್ ಲೇಔಟ್ ಕಡೆ ಬಿಎಂಟಿಸಿ ವೋಲ್ವೋ ಬಸ್ ಹೋಗುತ್ತಿದ್ದಾಗ ಮಾರ್ಗ ಮಧ್ಯದ ಪ್ಯಾಲೇಸ್ ಗುಟ್ಟಹಳ್ಳಿ ಫ್ಲೈಓವರ್ ಹತ್ತುವಾಗ ಬಸ್ ಪಲ್ಟಿಯಾಗಿದೆ.
ಚಾಲಕನಿಗೆ ತಲೆ ಸುತ್ತು ಬಂದ ಕಾರಣ ಬಸ್ ನಿಯಂತ್ರಣ ಕಳೆದು ಕೊಂಡಿದೆ. ಬಸ್ ರಸ್ತೆಯ ಮಗ್ಗುಲಿಗೆ ಹಾಕುವಷ್ಟರಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅವಘಡದ ವೇಳೆ ಚಾಲಕ ನಿರ್ವಾಹಕ ಸೇರಿ ೧೩ ಮಂದಿ ಬಸ್ಸಿನಲ್ಲಿದ್ದು ಅವರೆಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಘಟನೆಯಿಂದಾಗಿ ನಿನ್ನೆ ತಡರಾತ್ರಿಯವರೆಗೆ ಪ್ಯಾಲೇಸ್ ರೋಡ್ ನಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು ಪಲ್ಟಿಯಾದ ಬಸ್ ತೆರವುಗೊಳಿಸಿದ ಸದಾಶಿವನಗರ ಸಂಚಾರ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.