ಬಸ್ ನಿಲ್ದಾಣದ ಬಳಿ ಆಟೋಗಳ ನಿಷೇಧ ವಿರೋಧಿಸಿ ಚಾಲಕರ ಪ್ರತಿಭಟನೆ

ಕಲಬುರಗಿ,ಜು.17: ಕೇಂದ್ರ ಬಸ್ ನಿಲ್ದಾಣದ ಬಳಿ ಆಟೋ ರಿಕ್ಷಾಗಳಿಗೆ ಮುಖ್ಯ ದ್ವಾರದಿಂದ ನಿಷೇಧ ವಿಧಿಸಿರುವುದನ್ನು ವಿರೋಧಿಸಿ ಸೋಮವಾರ ಕಲ್ಯಾಣ ಕರ್ನಾಟಕ ಆಟೋ ಚಾಲಕರ ಸಂಘದ ಕಾರ್ಯಕರ್ತರು ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿದರು.

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ನಗರದಲ್ಲಿ ಬಸ್ ನಿಲ್ದಾಣದ ಹತ್ತಿರ ಆಟೋಗಳಿಗೆ ಬಿಡದೇ ಅನ್ಯ ಮಾರ್ಗದಿಂದ ಬಿಡುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಮತ್ತು ಚಾಲಕರ ನಡುವೆ ಗಲಾಟೆ ಆಗುತ್ತಿದೆ. ಇದರಿಂದಾಗಿ ಆಟೋ ಚಾಲಕರಿಗೆ ಗ್ಯಾಸ್ ಬಹಳಷ್ಟು ಸುಡುತ್ತಿದೆ. ಮೊದಲೇ ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಜನರು ಆಟೋ ಬಳಕೆ ಕಡಿಮೆ ಮಾಡಿದ್ದಾರೆ. ಈ ರೀತಿ ಅನ್ಯ ಮಾರ್ಗದ ಮೂಲಕ ಆಟೋ ಚಾಲಕರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ವಿರೋಧಿಸಿದರು.
ಸಂಚಾರ ದಟ್ಟಣೆಯನ್ನು ತಡೆಯಲು ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರಿ ಠಾಣೆಯ ಪೋಲಿಸರು ಹೇಳುತ್ತಿದ್ದಾರೆ. ಇದು ಮೂಲ ಕಾರಣವಲ್ಲ. ನಗರದಲ್ಲಿ ಪರವಾನಿಗೆ ಇಲ್ಲದ ಸುಮಾರು ಏಳು ಸಾವಿರ ಆಟೋಗಳು ಸಂಚರಿಸುತ್ತಿವೆ. ನಗರದಲ್ಲಿ ಒಟ್ಟಿನಲ್ಲಿ 14000 ಆಟೋಗಳಿದ್ದು, ಅವುಗಳಲ್ಲಿ ಅರ್ಧದಷ್ಟು ಅನಧಿಕೃತವಾಗಿವೆ. ಈ ಕುರಿತು ಏಳು ಬಾರಿ ಜಿಲ್ಲಾಧಿಕಾರಿಗಳಿಗೆ, ಉಪ ಸಾರಿಗೆ ಆಯುಕ್ತರಿಗೆ ಹಾಗೂ ಪೋಲಿಸ್ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಅನಧಿಕೃತ ಆಟೋಗಳಿಗೆ ಕಡಿವಾಣ ಹಾಕಿ ಪರವಾನಿಗೆ ಪಡೆದ ಆಟೋಗಳ ಚಾಲಕರಿಗೆ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ ಅವರು, ಒಂದು ವಾರದಲ್ಲಿ ಏನಾದರೂ ಕ್ರಮ ಕೈಗೊಳ್ಳದೇ ಹೋದಲ್ಲಿ ಹಾಗೂ ನೇರವಾಗಿ ಬಸ್ ನಿಲ್ದಾಣದ ಬಳಿ ಆಟೋಗಳನ್ನು ಬಿಡದೇ ಹೋದಲ್ಲಿ ಬಸ್ ನಿಲ್ದಾಣದ ಹತ್ತಿರ ಎಲ್ಲ ಚಾಲಕರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವರು ಎಂದು ಅವರು ಎಚ್ಚರಿಸಿದರು.
ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ್ ಆರ್. ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಸಂಜುಕುಮಾರ್ ಸಿ. ದಸ್ತಾಪುರ, ಕಾರ್ಯದರ್ಶಿ ಶ್ರೀಮಂತ್ ಬೋಳೆವಾಡ್ ಮುಂತಾದವರು ಪಾಲ್ಗೊಂಡಿದ್ದರು.