ಬಸ್ ನಿಲ್ದಾಣದ ಅಶುಚಿತ್ವ : ಡಿಪೋ ಮ್ಯಾನೇಜರ್, ಲಾಡ್ಜ್ ಮಾಲೀಕರಿಗೆ ನೊಟೀಸ್ ಜಾರಿಗೆ ಸೂಚನೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ9: ಮಳೆಗಾಲ ಹಿನ್ನೆಲೆಯಲ್ಲಿ ರಸ್ತೆಗಳು, ಚರಂಡಿಗಳ ಸ್ಥಿತಿಗತಿಯ ಪರಿಶೀಲನೆಗೆ ಜೂನ್ 08ರಂದು ನಗರ ಪ್ರದಕ್ಷಿಣೆ ಕೈಗೊಂಡ ವೇಳೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೊಸಪೇಟೆ ನಗರ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ಪರಿಶೀಲಿಸಿ ನಿರಂತರ ಸ್ವಚ್ಛತೆಯನ್ನು ಕಾಪಾಡದ ಹಿನ್ನೆಲೆಯಲ್ಲಿ ಡಿಪೋ ಮ್ಯಾನೇಜರ್ ಹಾಗೂ ಸ್ವಚ್ಛತೆ ಕಾಪಾಡದ ಲಾಡ್ಜ್ ಮಾಲಿಕರುಗಳಿಗೆ ನೊಟೀಸ್ ಜಾರಿ ಮಾಡಲು ಸೂಚನೆ ನೀಡಿದರು.
ಬಸ್ ನಿಲ್ದಾಣದಲ್ಲಿ ನೀರು ಹರಿಯುವುದನ್ನು ಗಮನಿಸಿದರು. ಈ ಹಿಂದೆ ಇದನ್ನು ಸರಿಪಡಿಸಲು ತಿಳಿಸಿದಾಗ್ಯೂ ನಿರ್ಲಕ್ಷ್ಯ ವಹಿಸಿದ್ದಾರೆ. ದುರ್ವಾಸನೆ ಇದ್ದರು ಕೂಡ ಡಿಪೋ ಮ್ಯಾನೇಜರ್ ಯಾವುದೇ ಕ್ರಮ ವಹಿಸದೇ ಇರುವುದರಿಂದ ಮ್ಯಾನುಯೆಲ್ ಸ್ಕ್ಯಾವೆಂಜರ್ ಅಧಿನಿಯಮದಡಿ ನೊಟೀಸ್ ಜಾರಿ ಮಾಡಿ ಕಠಿಣ ಕ್ರಮ ವಹಿಸಲು ಪೌರಾಯುಕ್ತರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಲಾಡ್ಜ್ ಗೆ ನೊಟೀಸ್ ಜಾರಿ:
ಬಸ್ ಸ್ಟಾಂಡ್ ಮುಂಭಾಗ ಹರಿಯುತ್ತಿರುವ ಚರಂಡಿ ನೀರಿನ ಮೂಲದ ಬಗ್ಗೆ ಪರಿಶೀಲಿಸಲು ಜಿಲ್ಲಾಧಿಕಾರಿಗಳು ತಿಳಿಸಿದಾಗ, ಹತ್ತಿರದ ವಿಶ್ವ ಲಾಡ್ಜ್ ಮುಂದೆ ಡ್ರೈನೇಜ್ ಲೈನಲ್ಲಿ ನೀರು ನಿಂತು ಅದು ಬಸ್ ಸ್ಟಾಂಡನತ್ತ  ಹರಿಯುತ್ತಿರುವುದು ಕಂಡು ಬಂದಿತು. ನಗರಸಭೆ ಪೌರಾಯುಕ್ತರೊಂದಿಗೆ ಜಿಲ್ಲಾಧಿಕಾರಿಗಳು, ಲಾಡ್ಜ್ ಒಳಗೆ ಪ್ರವೇಶಿಸಿ ಪರಿಶೀಲಿಸಿದರು. ಟ್ರೇಡ್ ಲೈಸೆನ್ಸ್ ಇಲ್ಲದೆ ಲಾಡ್ಜ್ ನಡೆಸುತ್ತಿರುವುದು ಜೊತೆಗೆ ನಗರಸಭೆಯ ಇನ್ನು ಕೆಲವು ಷರತ್ತುಗಳು ಉಲ್ಲಂಘನೆಯಾಗಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಈ ಬಗ್ಗೆ ಕೂಡಲೇ ನೋಟಿಸ್ ಜಾರಿ ಮಾಡಿ ನಿಯಮಾನಸಾರ  ಕ್ರಮವಹಿಸಲು ಜಿಲ್ಲಾಧಿಕಾರಿಗಳು ಪೌರಾಯುಕ್ತರಿಗೆ ನಿರ್ದೇಶನ ನೀಡಿದರು.
ಅಧಿಕಾರಿಗಳಿಗೆ ಸೂಚನೆ:
ಬಸ್ ನಿಲ್ದಾಣದಲ್ಲಿನ ಸಾರ್ವಜನಿಕ ಶೌಚಾಲಯಗಳಲ್ಲಿ ಹೆಚ್ಚಿನ ಹಣ ಪಡೆಯುತ್ತಾರೆ ಎನ್ನುವ ದೂರಿನ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು, ಹೆಚ್ಚಿನ ಹಣ ಪಡೆದು ಸಾರ್ವಜನಿಕರಿಗೆ ತೊಂದರೆ ಕೊಡಬಾರದು. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.