ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯದ ಕೊರತೆ:ಪ್ರತಿಭಟನೆ

ಅರಸೀಕೆರೆ, ಜು. ೧- ನಗರದ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಖಂಡಿಸಿ ರೈತ ಸಂಘದ ಕಾರ್ಯಕರ್ತರು ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ನಗರದ ಬಸ್ ನಿಲ್ದಾಣದಿಂದ ದಿನನಿತ್ಯ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತಿದ್ದು ಪ್ರತಿ ದಿನ ಸುಮಾರು ಆರು ಲಕ್ಷಕ್ಕೂ ಹೆಚ್ಚು ಆದಾಯ ತಂದು ಕೊಡುವ ಪ್ರತಿಷ್ಠಿತ ನಿಲ್ದಾಣದಲ್ಲಿ ಕನಿಷ್ಠ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಅಧಿಕಾರಿಗಳು ವಿಫಲವಾಗಿರುವುದನ್ನು ಖಂಡಿಸಿ ರೈತ ಸಂಘದ ಕಾರ್ಯಕರ್ತರು ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ರಾಜ್ಯ ಸಂಚಾಲಕ ಕನಕೆಂಚೇನಹಳ್ಳಿ ಪ್ರಸನ್ನಕುಮಾರ್ ಮಾತನಾಡಿ, ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್‌ಗೆ ಸ್ಥಳಾವಕಾಶವಿದ್ದರೂ ಹೋಟೆಲ್‌ನವರಿಗೆ ಅನುಕೂಲ ಮಾಡಿಕೊಡುವ ದೃಷ್ಠಿಯಿಂದ ಪ್ರಯಾಣಿಕರಿಗೆ ವಾಹನ ನಿಲುಗಡೆಗೆ ನಿಲ್ದಾಣದ ಪ್ರವೇಶ ದ್ವಾರವನ್ನು ಬಂದ್ ಮಾಡಲಾಗಿದೆ. ಇದರಿಂದ ಅಂಗವಿಕಲರು, ವೃದ್ಧರು ನಿಲ್ದಾಣದ ಒಳಗೆ ಬರಲು ಹರಸಾಹಸ ಪಡಬೇಕಾಗಿದೆ. ಅಲ್ಲದೆ ಎರಡು ಬದಿಯ ಪ್ರವೇಶ ದ್ವಾರದಲ್ಲಿ ದೊಡ್ಡ-ದೊಡ್ಡ ಗುಂಡಿಗಳು ಅಡ್ಡಾದಿಡ್ಡಿ ಬಿದ್ದಿರುವ ಕಲ್ಲು ಬಂಡೆಗಳಿಂದ ಪ್ರಯಾಣಿಕರು, ವಾಹನ ಸವಾರರು ಎದ್ದು-ಬಿದ್ದು ಗಾಯಗೊಂಡು ಹೋಗಬೇಕಾಗಿದ್ದರೂ ಸಂಬಂಧಪಟ್ಟವರು ಗಮನಿಸದೆ ಇರುವುದು ಅವರ ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದ್ದು ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸದ್ದಿದ್ದರೆ ಸಂಬಂಧಪಟ್ಟ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗ್ರಾಮಾಂತರ ಪ್ರದೇಶಗಳಿಂದ ಕುಡಿಯುವ ನೀರಿನ ಸೌಲಭ್ಯವಿಲ್ಲ. ಶೌಚಾಲಯ ಸ್ವಚ್ಛತೆ ಇಲ್ಲದೆ ಸಾಂಕ್ರಾಮಿಕ ರೋಗಗಳು ಹರಡುವ ಕೇಂದ್ರವಾಗಿದೆ. ಆದರೂ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಾರಿಗೆ ಸಂಸ್ಥೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದು ಇನ್ನೊಂದು ವಾರದಲ್ಲಿ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ .
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಆಯುಬ್ ಪಾಷ, ಎಜಾಜ್ ಪಾಷ, ಹನುಮಂತು, ಶಾಂತಣ್ಣ, ರಮೇಶ್‌ಕುಮಾರ್, ತಿಮ್ಮಪ್ಪ, ಮೊಹಮದ್ ದಸ್ತ್‌ಗೀರ್, ಶಶಿಕುಮಾರ್, ಮಮತಾ, ಮಂಜುಳಾ, ರಾಧ ಮತ್ತಿತರರು ಪಾಲ್ಗೊಂಡಿದ್ದರು.