ಬಸ್ ತಂಗುದಾಣ ನಿರ್ಮಿಸುವಂತೆ ಆಗ್ರಹಿಸಿ ಪ್ರತಿಭಟನೆ

ಲಕ್ಷ್ಮೇಶ್ವರ,ಜು.21: ತಾಲೂಕಿನ ಬಾಲೆಹೊಸೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಲಕ್ಷ್ಮೇಶ್ವರ ತಾಲೂಕ ಘಟಕದ ವತಿಯಿಂದ ಗ್ರಾಮದಲ್ಲಿ ಬಸ್ ತಂಗುದಾಣ ನಿರ್ಮಿಸುವಂತೆ ಆಗ್ರಹಿಸಿ ಬಿದ್ದ ಬಸ್ ನಿಲ್ದಾಣದಲ್ಲಿ ಎಮ್ಮೆ ಕಟ್ಟಿ ರೈತರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಪ್ರಮುಖರು, ಶಾಸಕರು, ಸಂಸದರು, ಗ್ರಾಮ ಪಂಚಾಯತಿಯವರು ಗ್ರಾಮದಲ್ಲಿ ಅನೇಕ ವರ್ಷಗಳಿಂದ ಬಿದ್ದಿರುವ ಬಸ್ ತಂಗುದಾಣ ನಿರ್ಮಾಣಕ್ಕೆ ಮುಂದಾಗದಿರುವುದು ಅತ್ಯಂತ ಖಂಡನೀಯ. ಜನರು ಗಾಳಿ, ಮಳೆಯಲ್ಲಿ, ಬಿಸಿಲಿನಲ್ಲಿ ಯಾರದೋ ಕಟ್ಟೆಯ ಮೇಲೆ ಚಹಾದಂಗಡಿಯ ಬಳಿ ಕುಳಿತು ಬಸ್ಸುಗಳನ್ನು ಹತ್ತುತ್ತಿದ್ದಾರೆ. ಅನೇಕ ವರ್ಷಗಳಿಂದ ಒತ್ತಾಯಿಸುತ್ತಿದ್ದರು ಜನ ಪ್ರತಿನಿಧಿಗಳು ಜನರ ಬೇಡಿಕೆಯನ್ನು ತಾತ್ಸಾರ ಮಾಡುತ್ತಿರುವುದು ಶೋಭೇಯಲ್ಲ ಜನರ ಸೈರಣೆಗೆ ಮಿತಿ ಇದೆ ತಾಳ್ಮೆ ಪರೀಕ್ಷಿಸುವುದು ಸಲ್ಲ ಎಂದು ಜನಪ್ರತಿನಿಧಿ ನಡೆಗೆ ಖಂಡಿಸಿದ್ದಾರೆ.
ಈ ಸಂದರ್ಭದಲ್ಲಿ ರಾಮಚಂದ್ರಪ್ಪ ಜಂಗಳಿ, ನಾಗಪ್ಪ ಸಣ್ಣ ತೋಟಗೇರ, ಮಾನಪ್ಪ ನಾರಾಯಣಪುರ, ತಿರುಕಪ್ಪ ಶಿಗ್ಲಿ, ಮಂಜುನಾಥ ಸುಣಗಾರ, ವೆಂಕಟೇಶ ಕಾಗನೂರ, ಮಂಜುನಾಥ ಗುಳೇರ್, ನಾಗಪ್ಪ ಕರಣ್ಣವರ, ಪ್ರಸನ್ನ ಲೋಹಾರ್, ಮಲ್ಲಪ್ಪ ಚಪ್ಪರಮನಿ, ಗುರುಪಾದಪ್ಪ ಜಾಲವಾಡಗಿ, ಗಂಗಪ್ಪ ಜಾಲವಾಡಗಿ, ವಿರೂಪಾಕ್ಷಪ್ಪ ಇಟಗಿ ಸೇರಿದಂತೆ ಅನೇಕರಿದ್ದರು.