ಬಸ್ ಚಾಲಕನ ಮೇಲೆ ಹಲ್ಲೆ

ಕಲಬುರಗಿ,ಜೂ.16-ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ಮಾಡಬೂಳ ಟೂಲ್ ನಾಕಾ ಬಳಿ ನಡೆದಿದೆ.
ಈ ಸಂಬಂಧ ಬಸ್ ಚಾಲಕ ಧನರಾಜ ಶಖಾಪುರ ಎಂಬುವವರು ಬಸ್ಸು (25) ಎಂಬಾತನ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಆಳಂದ ಘಟಕದಲ್ಲಿ ಧನರಾಜ ಶಖಾಪುರ ಅವರು ಬಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದು, ಆಳಂದ್-ಶ್ರೀಶೈಲ್ ರೂಟ್‍ನಲ್ಲಿ ಬಸ್ ಓಡಿಸುತ್ತಿದ್ದಾರೆ. ಎಂದಿನಂತೆ ಬಸ್ ಶ್ರೀಶೈಲ್‍ದಿಂದ ಆಳಂದಕ್ಕೆ ಬರುತ್ತಿರುವಾಗ ಚಾಲಕ ಧನರಾಜ ಅವರು ಮಾಡಬೂಳ ಟೂಲ್ ನಾಕಾದಲ್ಲಿ ಬಸ್ ನಿಲ್ಲಿಸಿ ಟೂಲ್ ಹಣ ಕೊಟ್ಟು ರಶೀದಿ ಪಡೆಯುತ್ತಿದ್ದಾಗ ಬೈಕ್ ಮೇಲೆ ಬಂದ ಬಸ್ಸು ಎಂಬಾತ ಮಾಡಬೂಳ ಕ್ರಾಸ್ ಬಳಿ ಬಸ್ ಏಕೆ ನಿಲ್ಲಿಸಿಲ್ಲ ಎಂದು ಕಂಡಕ್ಟರ್ ಕಾಶಿನಾಥ ಮಠಾಳೆ ಅವರನ್ನು ಪ್ರಶ್ನಿಸಿದ್ದಾನೆ. ಆಗ ಅವರು ಸ್ಟಾಫ್ ಇಲ್ಲ ಅದಕ್ಕಾಗಿ ಬಸ್ ನಿಲ್ಲಿಸಿಲ್ಲ ಎಂದಿದ್ದಾರೆ. ಆಗ ಚಾಲಕ ಧನರಾಜ ಅವರ ಬಳಿ ಹೋಗಿ ಮಾಡಬೂಳ ಕ್ರಾಸ್ ಬಳಿ ಎಲ್ಲಾ ಬಸ್‍ಗಳನ್ನು ನಿಲ್ಲಿಸುತ್ತಾರೆ ನೀನು ಏಕೆ ನಿಲ್ಲಿಸಿಲ್ಲ ಎಂದು ಪ್ರಶ್ನಿಸಿ ಅವಾಚ್ಯವಾಗಿ ಬೈಯ್ದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.