ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 27 :- ಶಾಲಾಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬರುತ್ತಿದ್ದ ಚಿರತಗುಂಡ ಮಾರ್ಗದ ಸಾರಿಗೆ ಸಂಸ್ಥೆ ಕೂಡ್ಲಿಗಿ ಘಟಕದ ಬಸ್ ಚಾಲಕ ಮಲ್ಲಿಕಾರ್ಜುನ ಇದೇ ತಿಂಗಳ 31ರಂದು ನಿವೃತ್ತಿ ಹೊಂದುತ್ತಿದ್ದು ಅವರಿಗೆ ಈ ಮಾರ್ಗದ ವಿದ್ಯಾರ್ಥಿಗಳೆಲ್ಲಾ ಸೇರಿ ಕೂಡ್ಲಿಗಿ ಬಸ್ ನಿಲ್ದಾಣದಲ್ಲಿ ಕೇಕ್ ಕತ್ತರಿಸಿ ಶಾಲುಹೊದಿಸಿ ಆತನಿಂದ ಕೇಕ್ ಕತ್ತರಿಸುವ ಮೂಲಕ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಿ ತಮ್ಮ ವೃತ್ತಿ ಜೀವನ ಸುಖಕರ ಹಾಗೂ ಆರೋಗ್ಯವಾಗಿರಲಿ ಎಂದು ಹಾರೈಸಿದರು.
ಮಲ್ಲಿಕಾರ್ಜುನ ಕೂಡ್ಲಿಗಿ ಘಟಕದ ಸಾರಿಗೆ ಸಂಸ್ಥೆಯ ಚಾಲಕನಾಗಿದ್ದು ಈತನು ಸತತ 7ವರ್ಷಗಳ ಕಾಲದ ಸೇವೆಯನ್ನು ಬಳ್ಳಾರಿ, ಹೊಸಪೇಟೆಯಲ್ಲಿ ಸೇವೆ ಸಲ್ಲಿಸಿ ಹಾಲಿ 20ವರ್ಷಗಳಿಂದ ಕೂಡ್ಲಿಗಿ ಘಟಕದಲ್ಲಿ ಹಿರಿಯ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದು ಇದೇ ತಿಂಗಳ 31ರಂದು ವೃತ್ತಿಯಿಂದ ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಹಾಲಿ ಚಿರತಗುಂಡ ಮಾರ್ಗದಲ್ಲಿ ಚಾಲಕ ವೃತ್ತಿಮಾಡುತ್ತಿದ್ದಾರೆ ಮಕ್ಕಳನ್ನು ಸಮಯಕ್ಕೆ ಸರಿಯಾಗಿ ಆಗಮಿಸಿ ಸುರಕ್ಷಿತವಾಗಿ ಕರೆದುಕೊಂಡು ಹೋಗಿಬರುತ್ತಿರುವುದರಿಂದ ಈ ಮಾರ್ಗದ ಚಿರತಗುಂಡ, ಹರವದಿ, ಗೆದ್ದಲಗಟ್ಟೆ, ಹುಲಿಕುಂಟೆ, ಜರ್ಮಲಿ ಗ್ರಾಮದ ಎಲ್ಲಾ ಮಕ್ಕಳ ಪಾಲಿಗೆ ಪ್ರೀತಿಗೆ ಪಾತ್ರರಾಗಿದ್ದು ಈ ಬಸ್ಸಿನಲ್ಲಿ ಬರುವ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ತಲಾ 10 ರಿಂದ 20ರೂ ಅನ್ನು ವೈಯಕ್ತಿಕವಾಗಿ ಸಂಗ್ರಹಿಸಿ ಕೇಕ್ ತಂದು ಮಲ್ಲಿಕಾರ್ಜುನ ಅವರಿಂದ ಕತ್ತರಿಸಿ ಮಕ್ಕಳು ಪ್ರೀತಿಯಿಂದ ಕೇಕ್ ತಿನ್ನಿಸಿ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ತಪಾಸಣಾಧಿಕಾರಿನಾಯ್ಕ್, ಕೂಡ್ಲಿಗಿ ಘಟಕದ ನಿರ್ವಾಹಕ ಚಂದ್ರು, ಜಾಕೀರ್, ಸೇರಿದಂತೆ ಅನೇಕ ಶಾಲಾಕಾಲೇಜಿನ ಈ ಮಾರ್ಗದ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.
ಸನ್ಮಾನ ಸ್ವೀಕರಿಸಿದ ಚಾಲಕ ಮಲ್ಲಿಕಾರ್ಜುನ ಮಕ್ಕಳ ಪ್ರೀತಿ ಕಂಡು ಕಂಬನಿ ಮಿಡಿದು ವೃತ್ತಿಯ ಸೇವೆಯನ್ನು ಸ್ಮರಿಸಿದರು ಮಕ್ಕಳ ಪ್ರೀತಿಗೆ ಆಭಾರಿ ಎಂದು ಮಲ್ಲಿಕಾರ್ಜುನ ತಿಳಿಸಿದರು.