ಬಸ್ – ಕಾರ್ ಡಿಕ್ಕಿ ಸ್ಥಳದಲ್ಲೇ ನಾಲ್ವರ ಸಾವು

ವಿಜಯಪುರ:ನ.28: ಇಲ್ಲಿಗೆ ಸಮೀಪದ ಜುಮನಾಳ ಕ್ರಾಸ್ ಬಳಿ ಕೆಎಸ್ ಆರ್ ಟಿಸಿ ಬಸ್ ಹಾಗೂ ಕಾರ್ ಮಧ್ಯೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ‌ ನಾಲ್ವರು ಸಾವಿಗೀಡಾಗಿದ್ದಾರೆ.
ಭಾನುವಾರ ಸಂಜೆ ವಿಜಯಪುರಕ್ಕೆ ಬರುತ್ತಿದ್ದ ಕಾರ್ ಗೆ ಎದುರಿನಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ. ಕಾರ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತರೆಲ್ಲರೂ ಅಂದಾಜು 30 ರ ವಯೋಮಾನದ ಪುರುಷರಾಗಿದ್ದಾರೆ. ಇವರು ಸೋಲಾಪುರ ಮೂಲದವರಾಗಿದ್ದಾರೆ. ಶವಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸಂಬಂಧಿಕರ ಬರುವಿಕೆಗಾಗಿ ಪೊಲೀಸರು ಕಾಯುತ್ತಿದ್ದಾರೆ. ಆ ಬಳಿಕವೇ ಮೃತರ ಹೆಸರು ತಿಳಿದು ಬರಲಿದೆ ಎಂದು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.