ಬಸ್-ಕಾರು ಡಿಕ್ಕಿ ನಾಲ್ವರ ಸಾವು

ಮಂಡ್ಯ,ಸೆ.೨೭-ವೇಗವಾಗಿ ಹೋಗುತ್ತಿದ್ದ ಕಾರು ಮುಂದೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಹಿಂದಿಕ್ಕುವ ಅತುರದಲ್ಲಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಬೆಂಗಳೂರಿನ ಮೂವರು ಸೇರಿ ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ಬಳಿಯ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ನಡೆದಿದೆ.
ಬೆಂಗಳೂರಿನ ಬೆಂಡಿಗಾನಹಳ್ಳಿಯ ನಮಿತಾ, ಬೆಂಗಳೂರಿನಲ್ಲಿ ವಾಸವಿದ್ದ ರಾಜಸ್ಥಾನ ಮೂಲದ ಪಂಕಜ್ ಶರ್ಮಾ, ಬೆಂಗಳೂರಿನ ವಂಶಿಕೃಷ್ಣ ಹಾಗೂ ಧಾರವಾಡದ ರಘುನಾಥ್ ಭಜಂತ್ರಿ ಮೃತಪಟ್ಟವರು.
ಹಾಸನ ಕಡೆಯಿಂದ ವೇಗವಾಗಿ ಬರುತ್ತಿದ್ದ ಶಿಫ್ಟ್ ಕಾರು, ಮುಂದೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅತಿಯಾದ ವೇಗವೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ಳೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.