ಬಸ್ ಉರುಳಿ ಮೂವರು ಸ್ಥಳದಲ್ಲೇ ಸಾವು:7 ಮಂದಿಗೆ ಗಾಯ

ಭೋಪಾಲ್, ಏ 20- ಕೊರೊನಾ ಲಾಕ್‍ಡೌನ್‍ನಿಂದಾಗಿ ತಮ್ಮ ಊರುಗಳತ್ತ ವಲಸೆ ಹೋಗುತ್ತಿದ್ದ ಕಾರ್ಮಿಕರ ಬಸ್ ಪಲ್ಟಿಯಾಗಿ ಮೂವರು ಸಾವನ್ನಪ್ಪಿ, 7 ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರಿನ ಝೋರಾಸಿ ಘಾಟ್‍ನಲ್ಲಿ ಇಂದು ಸಂಭವಿಸಿದೆ.

ದೆಹಲಿಯಿಂದ ಮಧ್ಯಪ್ರದೇಶದ ಟಿಕ್ಮಘರಕ್ಕೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿ ಬಿದ್ದು ಈ ಅವಘಡ ಸಂಭವಿಸಿದೆ.

ಈ ಬಸ್‍ನಲ್ಲಿ 100 ಮಂದಿ ಪ್ರಯಾಣ ಮಾಡುತ್ತಿದ್ದರು. ಈ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ದುರಂತ ರಸ್ತೆ ತಿರುವಿನಲ್ಲಿ ಸಂಭವಿಸಿದೆ. ಚಾಲಕನಿಗೆ ವಾಹನವನ್ನು ನಿಯಂತ್ರಿಸಲು ಕಷ್ಟವಾಗಿದೆ. ಹೀಗಾಗಿ ಬಸ್ ಕೆಳಮುಖವಾಗಿ ಬಿದ್ದಿದೆ. ಬಸ್‍ನ ಚಾಲಕ ಪರಾರಿಯಾಗಿದ್ದಾನೆ. ಆತ ಕುಡಿದಿದ್ದಾನೆ ಎಂಬ ಆರೋಪ ಕೇಳಿಬಂದಿದೆ ಎಂದು ಭಿಲೋವ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಅನಿಲ್ ಸಿಂಗ್ ಭಡೋರಿಯಾ ಹೇಳಿದ್ದಾರೆ.