ಬಸ್ ಅವ್ಯವಸ್ಥೆ: ವಿದ್ಯಾರ್ಥಿಗಳಿಂದ ಪ್ರತಿಭಟನೆ

(ಸಂಜೆವಾಣಿ ವಾರ್ತೆ)

ನವಲಗುಂದ, ಆ 4: ಸಮಯಕ್ಕೆ ಸರಿಯಾಗಿ ಬಸ್ ಬಾರದ ಕಾರಣ ಶಾಲಾ ವಿದ್ಯಾರ್ಥಿಗಳು ರಸ್ತೆ ಬಂದ್ ಮಾಡಿ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಕುಮಾರಗೊಪ್ಪದಲ್ಲಿ ನಡೆದಿದೆ.

ಬಸ್ ಅಸಮರ್ಪಕತೆ ಖಂಡಿಸಿ ವಿದ್ಯಾರ್ಥಿಗಳು ರಸ್ತೆ ತಡೆ ಮಾಡಿದ್ದರಿಂದ, ನಿನ್ನೆ ಸಂಜೆ ಹುಬ್ಬಳ್ಳಿ- ವಿಜಯಪುರ ನಡುವಿನ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಬಸ್‍ಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಇದರಿಂದಾಗಿ ಶಾಲೆಗೆ ಸಮಯಕ್ಕೆ ಸರಿಯಾಗಿ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಸಾರಿಗೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆ ಸಂದರ್ಭದಲ್ಲಿ ರಸ್ತೆ ಸಂಚಾರದಟ್ಟಣೆ ಹೆಚ್ಚಾಗಿದ್ದರಿಂದ ಸ್ಥಳಕ್ಕೆ ಆಗಮಿಸಿದ ಪಿಎಸ್‍ಐ ಜನಾರ್ಧನ್ ಬಿ. ಅವರು ವಿದ್ಯಾರ್ಥಿಗಳ ಮನವೊಲಿಸಿ ರಸ್ತೆ ಸಂಚಾರವನ್ನು ಸುಗಮಗೊಳಿಸಿದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಿದ್ದು ಕುಲಕರ್ಣಿ, ಚಂದ್ರಶೇಖರಪ್ಪ ಗುರುಶಿದ್ದಪ್ಪನವರ, ಮಹಾಂತೇಶ್ ಕುಲಕರ್ಣಿ, ಮಹಾಲಿಂಗಯ್ಯ ಹೊಸಮನಿ, ಬಸವರಾಜ್ ಕುಲಕರ್ಣಿ, ಮಹಾಂತೇಶ್ ಬಳಗಾನೂರಮಠ, ನಿಂಗಯ್ಯ ದಂಡಿನ, ಈರಣ್ಣ ಖಾತೆದಾರ, ಕಲ್ಲಪ್ಪ ಕುಲಕರ್ಣಿ, ಮಂಜುನಾಥ್ ಕಾಲವಾಡ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.