ಬಸ್ಸು ಹತ್ತುವ ವೇಳೆ 1.76 ಲಕ್ಷ ರೂ.ಮೌಲ್ಯದ ಚಿನ್ನಾಭರಣ, ನಗದು ಕಳವು

ಕಲಬುರಗಿ,ಸೆ.1-ಮಹಿಳೆಯೊಬ್ಬರು ಒಂದು ಕೈಯಲ್ಲಿ ಲಗೇಜ್ ಬ್ಯಾಗ್, ಇನ್ನೊಂದು ಕೈಯಲ್ಲಿ ಐದು ವರ್ಷದ ಮಗುವನ್ನು ಎತ್ತಿಕೊಂಡು ಬಸ್ಸು ಹತ್ತುತ್ತಿದ್ದ ವೇಳೆ ಅವರ ವ್ಯಾನಿಟಿ ಬ್ಯಾಗಿನೊಳಗಿದ್ದ 1.76 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವಿದ್ದ ಚಿಕ್ಕ ಪರ್ಸ್ ಕಳವಾದ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಚಿಂಚೋಳಿ ತಾಲ್ಲೂಕಿನ ಕಲ್ಯಾಣಗಡ್ಡಿ ಗ್ರಾಮದ ಸಹನಾ ಸಚ್ಚಿದಾನಂದ ಸುಂಕದ (35) ಎಂಬುವವರೆ ಚಿನ್ನಾಭರಣ, ನಗದು ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.
ಕಲಬುರಗಿಯಲ್ಲಿರುವ ಸಂಬಂಧಿಕರ ಮನೆಗೆ ಸೀರೆ ಉಡಿಸುವ ಕಾರ್ಯಕ್ರಮಕ್ಕೆಂದು 5 ವರ್ಷದ ಮಗುವಿನೊಂದಿಗೆ ಚಿಂಚೋಳಿ ತಾಲ್ಲೂಕಿನ ಕಲ್ಯಾಣಗಡ್ಡಿ ಗ್ರಾಮದಿಂದ ಬಂದಿದ್ದ ಅವರು ಕಾರ್ಯಕ್ರಮ ಮುಗಿದ ಮೇಲೆ ಮರಳಿ ಗ್ರಾಮಕ್ಕೆ ಹೋಗಲು ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಚಿಂಚೋಳಿಗೆ ಹೋಗುವ ಬಸ್ ಹತ್ತುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ವ್ಯಾನಿಟಿ ಬ್ಯಾಗಿನ ಚಿಕ್ಕ ಪರ್ಸ್‍ನಲ್ಲಿಟ್ಟಿದ್ದ 40 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಮಿನಿ ಗಂಟನ್, 1.20 ಲಕ್ಷ ರೂ.ಮೌಲ್ಯದ 30 ಗ್ರಾಂ.ಬಂಗಾರದ ತಾಳಿ ಸಾಮಾನು, 4 ಸಾವಿರ ರೂ.ಮೌಲ್ಯದ 1.ಗ್ರಾಂ.ಕಿವಿಯೋಲೆ, 12 ಸಾವಿರ ರೂ.ನಗದು ಸೇರಿ 1.76 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವಾಗಿದ್ದು, ಅವರು ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ..