ಬಸ್ಸುಗಳ ಕೊರತೆ – ಕೂಡ್ಲಿಗಿ ಬಸ್ ನಿಲ್ದಾಣದಲ್ಲಿ ಪರದಾಡಿದ ಪ್ರಯಾಣಿಕರು


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಆ. 4 :- ದಾವಣಗೆರೆಯಲ್ಲಿ ಬುಧವಾರ ನಡೆದ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75 ನೇ ಜನ್ಮದಿನದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಕೂಡ್ಲಿಗಿ ಘಟಕದಿಂದ ಒಪ್ಪಂದಮೇರೆಗೆ ಹೋಗಿದ್ದು ಪಟ್ಟಣದ ನಿಲ್ದಾಣದಲ್ಲಿ ಎರಡು ದಿನದ ಹಬ್ಬ ಮುಗಿಸಿಕೊಂಡು ಬುಧವಾರ ಹೊರಟ ಜನ ಬಸ್ಸುಗಳಿಲ್ಲದೆ ಪರದಾಡಿದ ಪ್ರಸಂಗ ಕಂಡುಬಂದಿತ್ತು.
ನಾಗರಪಂಚಮಿ ಹಬ್ಬಕ್ಕೆ ಸರ್ಕಾರಿ ರಜೆ ಇಲ್ಲದಿದ್ದರೂ ನಾಗರಪಂಚಮಿ ನಾಡಿಗೆ ದೊಡ್ಡದು ಎಂಬಂತೆ ಸೋಮವಾರ ಮತ್ತು ಮಂಗಳವಾರ ಹಬ್ಬದ ಸಂಭ್ರಮ ಮುಗಿಸುಕೊಂಡು ಹೊರಟ ನವದಂಪತಿಗಳು, ಕರ್ತವ್ಯಕ್ಕೆ ಹಾಜರಾಗಲು ಹೊರಟಿರುವ ನೌಕರರು ಹಾಗೂ ಇತರೆ ಪ್ರಯಾಣಿಕರು ಕೂಡ್ಲಿಗಿ ಬಸ್ ನಿಲ್ದಾಣದಲ್ಲಿ ಹೊಸಪೇಟೆ, ಸಂಡೂರು, ಬಳ್ಳಾರಿ, ಗುಡೇಕೋಟೆ, ಚಿತ್ರದುರ್ಗ, ಬೆಂಗಳೂರು, ಕೊಟ್ಟೂರು, ಹರಪನಹಳ್ಳಿ, ಚೋರನೂರು ಕಡೆಗೆ ಹೊರಟ ಪ್ರಯಾಣಿಕರ ಗೋಳು ಹೇಳತೀರದು ಈ ಪ್ರಯಾಣಿಕರ ಗೋಳು ಒಂದೆಯಾದರೆ ಇತ್ತ ಶಾಲಾಮಕ್ಕಳ ಗೋಳು ಮತ್ತೊಂದೆಡೆ ಕೂಡ್ಲಿಗಿ ಘಟಕದಿಂದ ಸುಮಾರು 50 ಬಸ್ಸುಗಳು ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಹೋಗಿದ್ದರಿಂದ ಶಾಲಾಮಕ್ಕಳು ಸಹ ಕೆಲಸಮಯ ಬಸ್ಸಿಗಾಗಿ ಪರದಾಡಿದ ಪ್ರಸಂಗ ಕಂಡುಬಂದಿತ್ತು.
ಪ್ರಯಾಣಿಕರ ಪರದಾಟ ಕಂಡು ಸಾರಿಗೆ ಅಧಿಕಾರಿಗಳಿಂದ ಬಸ್ ವ್ಯವಸ್ಥೆ : ಹಬ್ಬ ಮುಗಿಸಿಕೊಂಡು ಹೊರಟ ಜನ, ಶಾಲೆ ಮುಗಿಸಿಕೊಂಡು ಊರಿಗೆ ಸೇರುವ ಮಕ್ಕಳು ಕೂಡ್ಲಿಗಿ ನಿಲ್ದಾಣದಲ್ಲಿ ಪರದಾಡುತ್ತಿದ್ದ ಪ್ರಸಂಗ ಅರಿತ ಕೂಡ್ಲಿಗಿ ಘಟಕದ ಸಹಾಯಕ ಸಂಚಾರಿ ನಿರೀಕ್ಷಕ ಜಗದೀಶ್ ಹಾಗೂ ಕಂಟ್ರೋಲರ್ ಗಳು ಇರುವ ಎಂಟತ್ತು ಬಸ್ಸುಗಳನ್ನು ಬಳಸಿಕೊಂಡು ಹೊಸಪೇಟೆ, ಕೊಟ್ಟೂರು, ಸಂಡೂರು, ಚೋರನೂರು ಹೊಸಹಳ್ಳಿ ಕಡೆ ಹೋಗುವ ಪ್ರಯಾಣಿಕರಿಗೆ ಶಾಲಾಮಕ್ಕಳಿಗೆ ಬಸ್ ಬಿಡುವ ಮೂಲಕ ಸಮಸ್ಯೆ ಪರಿಹಾರ ಮಾಡಿದರು ಮತ್ತು ದೂರದ ಊರುಗಳಿಗೆ ಬೇರೆ ಘಟಕದ ಬಸ್ಸುಗಳು ಸಹ ಬಂದು ಅನೇಕ ಜನರ ಪರದಾಡುತ್ತಿದ್ದ ಪ್ರಯಾಣಿಕರ ಸಮಸ್ಯೆ ಬಗೆಹರಿಸಿ ಸಾರಿಗೆ ಅಧಿಕಾರಿಗಳು ನಿನ್ನೆಯ ದಿನ ನಿಟ್ಟುಸಿರು ಬಿಟ್ಟರು.