
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಮಾರ್ಗಮಧ್ಯದಲ್ಲಿಯೇ ಬಸ್ಸಿನ ಮಹಿಳಾ ನಿರ್ವಾಹಕಿಯು ಸದರಿ ಮಹಿಳೆಗೆ ಹೆರಿಗೆ ಮಾಡಿಸಿದ್ದು, ಮಗು ಮತ್ತು ಮಹಿಳೆ ಆರೋಗ್ಯವಾಗಿರುತ್ತಾರೆ.

ಈ ದಿನ ಚಿಕ್ಕಮಗಳೂರು ವಿಭಾಗದ ಚಿಕ್ಕಮಗಳೂರು ಘಟಕದ ವಾಹನ ಸಂಖ್ಯೆ ಕೆ.ಎ-18,ಎಫ್-0865ರಲ್ಲಿ ಬೆಂಗಳೂರು- ಚಿಕ್ಕಮಗಳೂರು ಮಾರ್ಗ ಕಾರ್ಯಾಚರಣೆಯ ವೇಳೆ ಉದಯಪುರ ಸಮೀಪವಿರುವ ಕೃಷಿ ಕಾಲೇಜು ಹತ್ತಿರ, ಸಮಯ ಸುಮಾರು 13-25 ರ ವೇಳೆ ನಿಗಮದ ವಾಹನದಲ್ಲಿ ಒಟ್ಟು 45 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.
ಈ ಪೈಕಿ ಬೆಂಗಳೂರಿನಿಂದ ಬೇಲೂರಿಗೆ ಪ್ರಯಾಣಿಸುತ್ತಿದ್ದ ಓರ್ವ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹತ್ತಿರ ಯಾವುದೇ ಆಸ್ಪತ್ರೆ ಇರುವುದಿಲ್ಲ ಹಾಗೂ ಅವರಿಗೆ ಸಹಾಯದ ಅಗತ್ಯವಿರುತ್ತದೆ ಎಂದು ಮನಗಂಡು ತಕ್ಷಣ ಬಸ್ಸಿನಲ್ಲಿದ್ದ ಮಹಿಳಾ ನಿರ್ವಾಹಕರು ವಾಹನವನ್ನು ನಿಲ್ಲಿಸಿ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರನ್ನು ಕೆಳಗೆ ಇಳಿಸಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ನಿರ್ವಾಹಕಿಯಾದ ಎಸ್ ವಸಂತಮ್ಮ,
ಚಾಲಕ-ಕಂ-ನಿರ್ವಾಹಕಿ ಬಿಲ್ಲೆ ಸಂಖ್ಯೆ 245 ಇವರು ಬಸ್ಸಿನಲ್ಲಿಯೇ ಹೆರಿಗೆಯನ್ನು ಮಾಡಿಸಿರುತ್ತಾರೆ. ಸದರಿ ಮಹಿಳೆಯು ಆರ್ಥಿಕವಾಗಿ ದುರ್ಬಲಳಾಗಿದ್ದ ಕಾರಣ ನಿಗಮದ ಚಾಲನಾ ಸಿಬ್ಬಂದಿಗಳು ಮಹಿಳೆಯ ತುರ್ತು ಖರ್ಚಿಗಾಗಿ ಎಲ್ಲಾ ಪ್ರಯಾಣಿಕರಿಂದ ಒಟ್ಟು ರೂ.1500-00 ಗಳನ್ನು ಸಂಗ್ರಹಿಸಿ ಮಹಿಳೆಗೆ ನೀಡಿರುತ್ತಾರೆ. ನಂತರ ಸದರಿ ಮಹಿಳೆಯನ್ನು ಆಂಬುಲೆನ್ಸ್ ಮುಖೇನ ಶಾಂತಿಗ್ರಾಮ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಯನ್ನು ದೊರಕಿಸಿರುತ್ತಾರೆ. ಈಗ ಮಹಿಳೆ ಮತ್ತು ಮಗು ಆರೋಗ್ಯವಾಗಿರುತ್ತಾರೆ.
ಸಕಾಲದಲ್ಲಿ ಸದರಿ ಮಹಿಳಾ ಪ್ರಯಾಣಿಕರಿಗೆ ಸ್ಪಂದಿಸಿ ಮಗು ಮತ್ತು ತಾಯಿಯನ್ನು ಉಳಿಸಿ ಮಾನವೀಯ ನೆರವನ್ನು ನೀಡಿದ ನಿರ್ವಾಹಕಿಯವರ ಕಾರ್ಯವು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಜಿ.ಸತ್ಯವತಿ ಭಾಆಸೇ ರವರು ತಿಳಿಸಿರುತ್ತಾರೆ.