ಬಸ್ಸಿಗಾಗಿ ವಿದ್ಯಾರ್ಥಿಗಳ ಪರದಾಟ: ತಾಲೂಕು ಆಡಳಿತ ನಿರ್ಲಕ್ಷ್ಯ

ಚಿತ್ತಾಪುರ:ಡಿ.23: ವಿವಿಧ ಶಾಲೆಗಳ ವಿದ್ಯಾರ್ಥಿಗಳು ಶಾಲೆ ಮುಗಿಸಿ ಕೊಂಡು ಬಸ್ ನಿಲ್ದಾಣದಿಂದ ಮರಗೋಳ, ಮುಡಬೂಳ, ಭಾಗೋಡಿ, ಕದ್ದರಗಿ, ಜೀವಣಗಿ ಗ್ರಾಮದ ವಿದ್ಯಾರ್ಥಿಗಳು ದಿನ ನಿತ್ಯ ಬಸ್ಸಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲಾ ವಿಷಯ ತಾಲೂಕು ಆಡಳಿತ ಗಮನಕ್ಕೆ ಇದ್ದರು ಕೊಡ ನಿರ್ಲಕ್ಷ್ಯ ತೋರುತ್ತಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಜಗದೇವ ಎಸ್ ಕುಂಬಾರ ಕಳವಳ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಬಸ್ ನಿಲ್ದಾಣಕ್ಕೆ ವಿದ್ಯಾರ್ಥಿಗಳು ಶಾಲೆ ಮುಗಿಸಿಕೊಂಡು ಸಂಜೆ 4.30ಕ್ಕೆ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಮುಡಬೂಳ, ಭಾಗೋಡಿ, ಕದ್ದರಗಿ, ಜೀವಣಗಿ ಗ್ರಾಮಕ್ಕೆ 5 ಗಂಟೆಗೆ ಬರಬೇಕಾದ ಬಸ್ ಸಂಜೆ 7 ಗಂಟೆಯಾದರೂ ಬಾರದಿದ್ದಾಗ ನೂರಾರು ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳು ಕೊಪಗೊಂಡು ಬಸ್ ನಿಲ್ದಾಣದಲ್ಲಿಯೇ ಸಾರಿಗೆ ಅಧಿಕಾರಿ ವಿರುದ್ಧ ಘೋಷಣೆ ಕೂಗಿದರು. ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಯಾವುದೇ ಬಸ್ ನಿಲ್ದಾಣದಿಂದ ಹೊರಗಡೆ ಹೋಗದಂತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.

‘ಸ್ಥಳೀಯ ಬಸ್ ಘಟಕದ ವ್ಯವಸ್ಥಾಪಕರು ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸದೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ನಿಲ್ದಾಣದ ಸುಭಾಷ್ ಎನ್ನುವ ಬಸ್ ನಿಯಂತ್ರಕರು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ’ ಬಸ್ ಯಾವಾಗ ಬರುತ್ತದೆ ಎಂದು ಕೇಳಿದರೆ ಬರುತ್ತದೆ ಎಂದು ಸುಮ ಸುಮ್ಮನೆ ನಮ್ಮ ಸಮಯ ವ್ಯರ್ಥ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿದಿನವೂ ಸಮಯಕ್ಕೆ ಸರಿಯಾಗಿ ಬಸ್ ಬರುವುದೇ ಇಲ್ಲ. ಸುಮಾರು 200 ಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದ್ದರು ಒಂದೇ ಬಸ್ ಓಡಿಸುತ್ತಿದ್ದರಿಂದ ತುಂಬಾ ಸಮಸ್ಯೆಯಾಗುತ್ತಿದೆ. ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು.

ಸ್ಥಳಕ್ಕೆ ಆಗಮಿಸಿದ ಪಿಎಸ್‍ಐ ಶ್ರೀಶೈಲ್ ಅಂಬಾಟಿ ಅವರು ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಮನವೊಲಿಸಿ ಬಸ್ ನಿಯಂತ್ರಕರ ಜೊತೆಗೆ ಮಾತನಾಡಿದ ಬಾಳಿಕ ಸಾರಿಗೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾತನಾಡಿ ಸಮಸ್ಯೆ ನಿವಾರಿಸಿ ಎರಡು ಬಸ್ಸಿನ ವ್ಯವಸ್ಥೆ ಮಾಡಿಸಿ ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ಹೋಗಲು ಅನುಕೂಲ ಮಾಡಿಕೊಟ್ಟರು.

ಇದೇ ರೀತಿ ಬಸ್ ಸಮಸ್ಯೆ ಮುಂದುವರಿದರೆ ಮುಂದೊಂದಿನ ಬಸ್ ಘಟಕಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ದಲಿತ ವಿದ್ಯಾರ್ಥಿ ಪರಿಷತ್ ಎಚ್ಚರಿಕೆ ನೀಡಿದರು.