ಬಸಾಪಟ್ಟಣ ವಾರದ ಸಂತೆಯಲ್ಲಿ ಮತದಾನದ  ಜಾಗೃತಿ ಜಾಥಾ


ಸಂಜೆವಾಣಿ ವಾರ್ತೆ
ಗಂಗಾವತಿ, ಏ.26:  ತಾಲೂಕಿನ ಬಸಾಪಟ್ಟಣ ವಾರದ ಸಂತೆಯಲ್ಲಿ ಮತದಾನ ಜಾಗೃತಿ ಗೀತೆಗಳಿಗೆ ಲಿಂಗತ್ವ ಅಲ್ಪಸಂಖ್ಯಾತರು ನೃತ್ಯ ಮಾಡಿ ಸಂತೆಗೆ ಬಂದ ಜನರಿಗೆ ಮತದಾನದ ಅರಿವು ಮೂಡಿಸಿದರು.
ಗಮನ ಸೆಳೆದ ಜಾಥಾ : ಮತದಾನ ಜಾಗೃತಿ ಫಲಕಗಳನ್ನು ಹಿಡಿದು ಜಾಗೃತಿ ಗೀತೆಗಳೊಂದಿಗೆ ವಾರದ ಸಂತೆ ಹಾದಿಯಲ್ಲಿ ಹಾಗೂ ಗ್ರಾಮದ ಬಸ್ ನಿಲ್ದಾಣ, ಪ್ರಮುಖ ವೃತ್ತಗಳಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಮತದಾನ ಜಾಗೃತಿ ಜಾಥಾ ನಡೆಸಲಾಯಿತು. ನಂತರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಜಾಥಾದಲ್ಲಿ ಮೂವರು ಲಿಂಗತ್ವ ಅಲ್ಪಸಂಖ್ಯಾತರು ಎಲ್ಲರಂತೆ ಜಾಗೃತಿ ಫಲಕ ಹಿಡಿದು ಪಾಲ್ಗೊಂಡಿದ್ದರು. ಮತದಾನ ಜಾಗೃತಿ ಗೀತೆಗಳಿಗೆ ನೃತ್ಯ ಮಾಡಿ ಸಂತೆಗೆ ಬಂದ ಜನರಿಗೆ ಮತದಾನದ ಮಹತ್ವ ಸಾರಿದರು. ನಂತರ ಬಸಾಪಟ್ಟಣ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾದ ಇಂದಿರಾ ಅವರು ಮಾತನಾಡಿ, ಮೇ 10 ರಂದು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಶೇ 100 ರಷ್ಟು ಮತದಾನ ಮಾಡಬೇಕು. ಯಾರು ಯಾವುದೇ ಆಮೀಷಕ್ಕೆ ಬಲಿಯಾಗದೆ ಅರ್ಹ ಅಭ್ಯರ್ಥಿಗಳಿಗೆ ತಮ್ಮ ಹಕ್ಕು ಚಲಾಯಿಸುವಂತೆ ಹೇಳಿದರು.
ಲಿಂಗತ್ವ ಅಲ್ಪಸಂಖ್ಯಾತರಾದ ಶರಣಮ್ಮ, ಹುಲಿಗೆಮ್ಮ, ರಾಜೇಶ್ವರಿ, ಗ್ರಾ.ಪಂ. ಕಾರ್ಯದರ್ಶಿ  ನಾಗೇಶ ಸಜ್ಜನ್,  ತಾಲೂಕು ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ, ಗ್ರಾ.ಪಂ. ಸಿಬ್ಬಂದಿಗಳಾದ ಶರಣಪ್ಪ, ಬೆಟ್ಟಪ್ಪ, ಹುಲಗಪ್ಪ, ಗ್ರಾಪಂ ಎಲ್ಲ ಸಿಬ್ಬಂದಿಗಳು, ಎನ್ ಆರ್ ಎಲ್ ಎಂ ಸಂಜೀವಿನಿ ಯೋಜನೆ ಎಂ.ಬಿ.ಕೆ, ಸ್ವಸಹಾಯ ಸಂಘದ ಸದಸ್ಯರು ಇದ್ದರು.