ಬಸವ ಮಹಾಮನೆಯ ಮೇರು ಪರ್ವತ ಅಕ್ಕಮಹಾದೇವಿ : ಚನ್ನಬಸವಾನಂದ ಶ್ರೀ

ಬೀದರ:ಏ.26: ವೀರವಿರಾಗಿಣಿ ಅಕ್ಕಮಹಾದೇವಿಯವರು 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ನಿರ್ಮಿಸಿದ ಅನುಭವ ಮಂಟಪ ಹಾಗೂ ಬಸವ ಮಹಾಮನೆಯ ಜ್ಞಾನದ ಮೇರು ಪರ್ವತವಾಗಿದ್ದರು ಎಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಪೂಜ್ಯ ಶ್ರೀ ಡಾ. ಚನ್ನಬಸವಾನಂದ ಶ್ರೀಗಳು ತಿಳಿಸಿದರು.
ನಗರದ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ ಮತ್ತು ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ವತಿಯಿಂದ ಆಯೋಜಿಸಿದ ಶಿವಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಮಹಾದೇವಿಯವರ ಅಪಾರ ಜ್ಞಾನವನ್ನು ಪರೀಕ್ಷೆಯ ಮೂಲಕ ಕಂಡುಕೊಂಡ ಅಲ್ಲಮಪ್ರಭುಗಳು ಅವರನ್ನು ಅಕ್ಕಾ ಎಂದು ಹೆಸರಿಟ್ಟರು. ಈಗ ಜಗದಕ್ಕ, ಜಗನ್ಮಾತೆ ಮತ್ತು ವೀರವಿರಾಗಿಣಿಯಾಗಿ ಶರಣ ಸಂಕುಲದ ಮನೆಮನದಲ್ಲಿ ಅಕ್ಕಮಹಾದೇವಿ ಹೆಸರು ಚಿರಸ್ಥಾಯಿಯಾಗಿದೆ ಎಂದು ತಿಳಿಸಿದರು.
ಬಸವ ಮಂಟಪದ ಪೂಜ್ಯ ಶ್ರೀ ಮಾತೆ ಸತ್ಯಾದೇವಿ ಮಾತನಾಡಿ ಅಕ್ಕಮಹಾದೇವಿ ಮಹಿಳಾ ಕುಲದ ಸ್ಫೂರ್ತಿಯಾಗಿದ್ದಾರೆ. ಸ್ತ್ರೀಕುಲ ಕಣ್ಮಣಿಯಾಗಿದ್ದಾರೆ. ಅವರ ವಚನಗಳು ಇಂದಿನ ಮಹಿಳೆಯರಿಗೆ ಬಡಿದೆಬ್ಬಿಸುವಂತಿವೆ. ಪ್ರತಿದಿನ ತಾಯಂದಿರು ಅಕ್ಕಮಹಾದೇವಿ ವಚನಗಳನ್ನು ಅಧ್ಯಯನ ಮಾಡಬೇಕು. ಜೀವನದಲ್ಲಿ ಧೈರ್ಯ ತಂಡುಕೊಂಡು ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಇದೇ ವೇಳೆ ವಿಶೇಷವಾಗಿ ಅಕ್ಕಮಹಾದೇವಿಯವರ ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವರಾಜ ಪಾಟೀಲ ಅತಿವಾಳ, ಬಸವಂತರಾವ ಬಿರಾದಾರ, ಶಿವಶರಣಪ್ಪ ಪಾಟೀಲ ಹಾರೂರಗೇರಿ, ನಿರ್ಮಲಾ ನಿಲಂಗೆ, ಸುರೇಶ ಪಾಟೀಲ, ವಿಶ್ವನಾಥ ಪಾಟೀಲ, ಮಲ್ಲಿಕಾರ್ಜುನ ಶಹಾಪುರ, ಶ್ರೀನಾಥ ಕೋರೆ, ಶಿವಾಜಿ ಭೋಸ್ಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.