ಬಸವ ದೀಪ್ತಿ ಕೃತಿ ಬಿಡುಗಡೆ, ವಿಶೇಷ ಉಪನ್ಯಾಸ ಮಾ.21ರಂದು ಶಿವಕೇರಿ ಅಭಿನಂದನಾ ಸಮಾರಂಭ

ಕಲಬುರಗಿ:ಮಾ.18: ಜೇವರ್ಗಿ ತಾಲೂಕಿನ ಕೃಷ್ಣಾ ಭಾಗ್ಯ ಜಲ ನಿಗಮ, ಅವರಾದ್ (ಕ್ಯಾಂಪ್) ಕಚೇರಿಯಲ್ಲಿ ಶೀಘ್ರಲಿಪಿಕಾರರಾಗಿ ಸುದೀರ್ಘ 25 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಬಸವರಾಜ ಶಿವಕೇರಿಯವರ ಗೌರವಾರ್ಥ ಅಭಿನಂದನಾ ಸಮಾರಂಭ ಹಾಗೂ ‘ಸಂವಿಧಾನ-ಧರ್ಮ-ರಾಜಕಾರಣ’ ಕುರಿತ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಇದೇ ಮಾರ್ಚ್ 21ರಂದು ಬೆಳಗ್ಗೆ 11ಕ್ಕೆ ಕಲಬುರಗಿಯ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಡಾ.ಚಂದ್ರಶೇಖರ ದೊಡ್ಡಮನಿ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಈ ಕುರಿತು ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶ್ರೀ ಬಸವರಾಜ ಶಿವಕೇರಿ ಅಭಿನಂದನಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ಈ ಸಮಾರಂಭದಲ್ಲಿ ಶಿವಕೇರಿಯವರ ವೃತ್ತಿ ಬದುಕಿನ ಜೊತೆಗೆ, ಸಮಾಜದ ಹಲವು ಮಹತ್ವದ ಅಂಶಗಳ ಮೇಲೆ ವಿಷಯ ತಜ್ಞರು ಬರೆದಿರುವ ಲೇಖನಗಳನ್ನು ಒಳಗೊಂಡ ‘ಬಸವ ದೀಪ್ತಿ’ ಅಭಿನಂದನಾ ಕೃತಿ ಬಿಡುಗಡೆ ಸಹ ಇದೇ ಸಂದರ್ಭದಲ್ಲಿ ನಡೆಯಲಿದೆ. ಹಿರಿಯ ಪತ್ರಕರ್ತ ಶೆಳ್ಳಗಿ ದೇವೇಂದ್ರ ಅವರ ಪ್ರಧಾನ ಸಂಪಾದಕತ್ವ ಹಾಗೂ ಎನ್‍ಎಸ್‍ಎಸ್ ವಿಭಾಗಾಧಿಕಾರಿ ಡಾ.ಚಂದ್ರಶೇಖರ ದೊಡ್ಡಮನಿ ಸಂಪಾದಕತ್ವದಲ್ಲಿ ಈ ಕೃತಿ ಹೊರತರಲಾಗಿದ್ದು, ‘ಮಹಾಕಾಶಿ’ ಪ್ರಕಾಶನದ ವತಿಯಿಂದ ಕೃತಿ ಪ್ರಕಟಿಸಲಾಗಿದೆ. ಡಾ.ಅಂಬೇಡ್ಕರ್ ಚಿಂತನಾ ಲೇಖನಗಳು, ಬುದ್ಧನ ಚಿಂತನಾ ಲೇಖನಗಳು, ವೈಚಾರಿಕ ಲೇಖನಗಳು, ಸ್ನೇಹ ಸಾಗರದಲ್ಲಿ… ಹಾಗೂ ಕಾವ್ಯಸಿರಿ ಎಂಬ ಐದು ವಿಭಾಗಗಳಲ್ಲಿ ಕೃತಿಯನ್ನು ವಿಭಜಿಸಿದ್ದು, ಇದೊಂದು ಅಭಿನಂದನಾ ಕೃತಿ ಎಂಬುದಕ್ಕಿಂತಲೂ ಸಂಗ್ರಹಯೋಗ್ಯ ಕೃತಿ ಆಗುವ ನಿಟ್ಟಿನಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕೃತಿ ರೂಪಿಸಲಾಗಿದೆ ಎಂದು ವಿವರಿಸಿದರು.
ಬಸವ ಕಲ್ಯಾಣದ ನೀಲಾಂಬಿಕಾ ಬಸವ ಯೋಗ ಕೇಂದ್ರದ ಪೂಜ್ಯ ಡಾ.ಸಿದ್ಧರಾಮ ಬೆಲ್ದಾಳ ಶರಣರು ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸುತ್ತಿದ್ದು, ಅಣದೂರು ಬುದ್ಧವಿಹಾರದ ಪೂಜ್ಯ ಭಂತೆ ವರಜ್ಯೋತಿ ನೇತೃತ್ವ ವಹಿಸಲಿದ್ದಾರೆ. ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷರು ಹಾಗೂ ಶಿಕ್ಷಣ ತಜ್ಞ ರಾಧಾಕೃಷ್ಣ (ಆರ್.ಕೆ) ಸಮಾರಂಭ ಉದ್ಘಾಟಿಸಲಿದ್ದು, ಸಾಹಿತಿ ಅರವಿಂದ ಮಾಲಗತ್ತಿ ಲೋಕಾರ್ಪಣೆ ಬಳಿಕ ಉಪನ್ಯಾಸ ನೀಡಲಿದ್ದಾರೆ ಎಂದರು.
ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಲಿಂಗಣ್ಣ ಗೋನಾಳ ಅಧ್ಯಕ್ಷತೆ ವಹಿಸಲಿದ್ದು, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್‍ಕುಮಾರ್ ಹೊಸಮನಿ, ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವ ಡಾ.ಶರಣಪ್ಪ ಸತ್ಯಂಪೇಟೆ, ಕರ್ನಾಟಕ ರಾಜ್ಯ ಬೆರಳಚ್ಚು ಮತ್ತು ಶೀಘ್ರಲಿಪಿ ಹಾಗೂ ಗಣಕಯಂತ್ರ ವಿದ್ಯಾಶಾಲೆಗಳ ಸಂಘದ ಅಧ್ಯಕ್ಷ ಆರ್.ಎಸ್.ಯೋಗೇಶ್, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಧೀಕ್ಷಕ ಅಭಿಯಂತರ ಮಲ್ಲಿಕಾರ್ಜುನ ಎಂ.ಎಸ್, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ.ಅಪ್ಪಗೆರೆ ಸೋಮಶೇಖರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಉಪನ್ಯಾಸದ ಬಳಿಕ ನಡೆಯಲಿರುವ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಹೋರಾಟಗಾರ ಬುದ್ಧಘೋಷ ದೇವೇಂದ್ರ ಹೆಗ್ಗಡೆ, ಹಿರಿಯ ಪತ್ರಕರ್ತ ಡಾ.ಶಿವರಂಜನ ಸತ್ಯಂಪೇಟೆ, ಸಾಹಿತಿ ಡಾ.ಪುಟ್ಟಮಣಿ ದೇವಿದಾಸ ಹಾಗೂ ಸಾಹಿತಿ ಡಾ.ರಾಜಶೇಖರ ಮಾಂಗ್ ಪಾಲ್ಗೊಳ್ಳಲಿದ್ದಾರೆ. ಸಾಹಿತಿ ಡಾ.ಚಿ.ಸಿ.ನಿಂಗಣ್ಣ ಕೃತಿಯ ಕುರಿತು ಮಾತನಾಡಲಿದ್ದು, ಸಾಹಿತಿ ಡಾ.ವಿಜಯಕುಮಾರ ಸಾಲಿಮನಿ ಅವರು ಬಸವರಾಜ ಶಿವಕೇರಿಯವರ ಕುರಿತು ಮಾತನಾಡಲಿದ್ದಾರೆ. ‘ಬಸವ ದೀಪ್ತಿ’ ಅಭಿನಂದನಾ ಕೃತಿಯ ಪ್ರಧಾನ ಸಂಪಾದಕ ಶೆಳ್ಳಗಿ ದೇವೇಂದ್ರ ಅವರ ಗೌರವ ಉಪಸ್ಥಿತಿಯಲ್ಲಿ ಬಸವರಾಜ ಶಿವಕೇರಿಯವರಿಗೆ ಸನ್ಮಾನ ನೆರವೇರಲಿದೆ ಎಂದು ನುಡಿದರು.
ಅಭಿನಂದನಾ ಸಮಿತಿಯ ಅಧ್ಯಕ್ಷ ಪ್ರೊ.ಲಿಂಗಣ್ಣ ಗೋನಾಲ, ಕಾರ್ಯಾಧ್ಯಕ್ಷ ಮಹೇಶ್ ಕುಲಕರ್ಣಿ, ಬಸವರಾಜ ಶಿವಕೇರಿ ಸುದ್ದಿಗೋಷ್ಠಿಯಲ್ಲಿ ಇದ್ದರು.