
ಆಳಂದ:ಎ.24: ಸರ್ವ ಜನಾಂಕ್ಕೆ ದಾರಿ ದೀಪವಾದ ಬಸವ ತತ್ವ ಎಲ್ಲರಿಗೂ ಸಮಾನವಾದ ಅವಕಾಶ ಮಾಡಿಕೊಡುವ ಮೂಲಕ ಸರ್ವಕಾಲಕ್ಕೂ ಆದರ್ಶ ಪ್ರೇರಣೆಯಾಗಿದೆ. ಬಸವಾದಿ ಶರಣರ ತತ್ವಗಳನ್ನು ನಿತ್ಯ ಜೀವನದಲ್ಲಿ ಆಚರಣೆಗೆ ತರಬೇಕು ಎಂದು ನಿಂಬರಗಾ ವಿರಕ್ತಮಠದ ಶ್ರೀ ಶಿವಲಿಂಗ ದೇವರು ಕರೆ ನೀಡಿದರು.
ತಾಲೂಕಿನ ನಿಂಬರ್ಗಾ ಗ್ರಾಮದ ಬಸವೇಶ್ವರ ವೃತ್ತದಲ್ಲಿ ರವಿವಾರ ವಿಶ್ವಗುರು ಬಸವಣ್ಣನವರ ಜಯಂತಿಯ ಆಚರಣೆ ಅಂಗವಾಗಿ ನಡೆದ ಭಾವಚಿತ್ರದ ಪೂಜೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬಸವಣ್ಣನವರು ವ್ಯಕ್ತಿಯಾಗಿರದೇ ಅವರೊಬ್ಬ ಮಹಾನ್ ಮಾನವತವಾದಿ, ತಮ್ಮ ಅನುಭವ ಮಂಟಪದಲ್ಲಿ ಎಲ್ಲರಿಗೂ ಸರಿಸಮಾನವಾದ ಅವಕಾಶ ಮಾಡಿಕೊಡುವ ಮೂಲಕ ಸಮಾನತೆಯ ಮಹತ್ವವನ್ನು ಅಂದೇ ಸಾರಿದರು. ಬಸವಣ್ಣನವರ ತತ್ವ ಆದರ್ಶಗಳು ಎಲ್ಲರಿಗೂ ಪ್ರೇರಣೆಯಾಗಿವೆ ನಿತ್ಯ ಜೀವನದಲ್ಲಿ ಅವರ ವಚನಗಳನ್ನು ಅಧ್ಯಯನ ಕೈಗೊಳ್ಳಬೇಕು ಎಂದರು.
ಈ ಸಂಧರ್ಭದಲ್ಲಿ ಬಸವ ಉತ್ಸವ ಸಮಿತಿಯ ಅಧ್ಯಕ್ಷ ಲಕ್ಷ್ಮೀಕಾಂತ ದಗೊಂಡ, ವಿರಶೈವ ಲಿಂಗಾಯತ ಸಂಘಟನಾ ವೇದಿಕೆಯ ಅಧ್ಯಕ್ಷ ರಾಮು, ಬಿಜೆಪಿ ಮುಖಂಡ ಅಮೃತ ಬೀಬ್ರಾಣಿ, ಗ್ರಾಪಂ. ಅಧ್ಯಕ್ಷ ಸಾತಣ್ಣ ಮಂಟಗಿ, ಚಂದ್ರಯ್ಯ ಸ್ವಾಮಿ, ಭಾಗಣ್ಣ ದುಗೊಂಡ, ಶಾಂತಕುಮಾರ ಯಳಸಂಗಿ, ಶ್ರೀಮಂತ ವಗ್ದರ್ಗಿ, ಗುರು ಕಾಮಣಗೋಳ, ಈರಣ್ಣ ನಾಗಶೆಟ್ಟಿ, ರಾಜು ಚವ್ಹಾಣ, ಮಲ್ಲಿಕಾರ್ಜುನ ನಾಟೀಕಾರ, ಬಸವರಾಜ ಯಳಸಂಗಿ, ಅಂಬ್ರೀಷ ಶರಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.