ಬಸವ ತತ್ವ ರಾಷ್ಟ್ರ ಮಟ್ಟದ ಉತ್ಸವ ಆಗುವ ಜೊತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಹೊಂದಲಿದೆ

ಬಸವಕಲ್ಯಾಣ:ನ.25: ಇಲ್ಲಿಯ ಅನುಭವ ಮಂಟಪದ ಪರಿಸರದಲ್ಲಿ ನವೆಂಬರ 26 ಹಾಗೂ 27ರಂದು ಜರುಗಲಿರುವ 43ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದ ನಿಮಿತ್ಯ ಅನುಭವ ಮಂಟಪದ ಪರಿಸರದಲ್ಲಿ ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಬೇಕಾದ ಸಕಲ ವ್ಯವಸ್ಥೆಯನ್ನು ಇಲ್ಲಿಯ ವಿಶ್ವ ಬಸವ ಧರ್ಮ ಟ್ರಸ್ಟ್‍ನ ವತಿಯಿಂದ ಕೈಗೊಳ್ಳಲಾಗಿದೆ.

ಅನುಭವ ಮಂಟಪದ ಪರಿಸರದಲ್ಲಿ ಬೃಹತ್ ಪ್ರಮಾಣದಲ್ಲಿ ಪೆಂಡಾಲ ನಿರ್ಮಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಪ್ರತಿ ವರ್ಷ ನಡೆಯುವ ಕಾರ್ಯಕ್ರಮ ಪಕ್ಕದಲ್ಲಿಯೇ ಈ ವರ್ಷ ಕಾರ್ಯಕ್ರಮ ಜರುಗಲಿದೆ. ಮುಖ್ಯ ವೇದಿಕೆಯ ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸುವ ಜನರ ವಾಹನಗಳಿಗಾಗಿ ನಿಲ್ಲಲು ಪ್ರತ್ಯೇಕ ವಾಹನದ ವ್ಯವಸ್ಥೆ ಹಾಗೂ ದಾಸೋಹ ವೈವಸ್ಥೆ ಸ್ಥಳ ನಿಗದಿಗೊಳಿಸಲಾಗಿದ್ದು ಆ ಸ್ಥಳದಲ್ಲಿ ಬೇಕಾದ ಸಿದ್ದತೆಗಳು ಕೈಗೊಳ್ಳಲಾಗುತ್ತಿದೆ.

ಅನುಭವ ಮಂಟಪದಲ್ಲಿ ಗುರುವಾರ ವಿಶ್ವ ಬಸವ ಧರ್ಮ ಟ್ರಸ್ಟ್‍ನ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಗಿದ್ದು ಇದರಲ್ಲಿ ಗಣ್ಯರು, ಪ್ರಮುಖರು, ಅಧಿಕಾರಿಗಳು ಭಾಗವಹಿಸಿದ್ದರು. ನಂತರ ಅನುಭವ ಮಂಟಪ ಟ್ರಸ್ಟ್‍ನ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಶಾಸಕ ಶರಣು ಸಲಗರ, ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಆನಂದ ದೇವಪ್ಪ ಸೇರಿದಂತೆ ಪ್ರಮುಖರು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತೆರಳಿ ಪರಿಶೀಲಿಸುವ ಜೊತೆಗೆ ಬೇಕಾದ ಕ್ರಮದ ಕುರಿತು ಸಮಾಲೋಚನೆ ನಡೆಸಿದರು.

ಪತ್ರಿಕಾಗೋಷ್ಠಿ ಉದ್ದೇಶಿಸಿ ಅನುಭವ ಮಂಟಪ ಟ್ರಸ್ಟ್‍ನ ಅಧ್ಯಕ್ಷ ಡಾ. ಬಸವಲಿಂಗ ಮಾತನಾಡಿ, ಅನುಭವ ಮಂಟಪದಲ್ಲಿ ಪ್ರತಿ ವರ್ಷ ಜರುಗಲಿರುವ ಈ ಕಾರ್ಯಕ್ರಮ ಮುಂದೊಂದು ದಿನ ರಾಷ್ಟ್ರ ಮಟ್ಟದ ಉತ್ಸವ ಆಗುವ ಜೊತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇದು ಪ್ರಖ್ಯಾತಿ ಹೊಂದಲಿದೆ. ಈ ಬಸವ ತತ್ವ ವಿಶ್ವ ಮಾನ್ಯ ತತ್ವವಾಗಿದೆ. ಹೀಗಾಗಿ ಬಸವ ತತ್ವ ವ್ಯಾಪಕವಾಗಿ ಪ್ರಚಾರ ಹಾಗೂ ಪ್ರಸಾರ ಮಾಡುವ ನಿಟ್ಟಿನಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಮಾಡಿದ್ದು ಅಲ್ಪ ಮಾಡಬೇಕಾಗಿದ್ದು ಇನ್ನೂ ಬಹಳಷ್ಟಿದೆ ಹೀಗಾಗಿ ಈ ತತ್ವ ಜಗತ್ತಿಗೆ ಮುಟ್ಟಿಸುವ ನಿಟ್ಟಿನಲ್ಲಿ ಚಿಂತನ-ಮಂಥನಗಳು ಜರುಗಬೇಕು ಎಂದರು.

ಎರಡು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಿಂದ ಬಸವ ಭಕ್ತರು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ನಾವೆಲ್ಲೆರೂ ಸೇರಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಬೇಕಿದೆ ಅದು ಪ್ರತಿಯೊಬ್ಬ ಬಸವ ಭಕ್ತರ ಆದ್ಯ ಕರ್ತವ್ಯವಾಗಿದೆ ಎಂದ ಶ್ರೀಗಳು ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾದಿಗಳಿಗಾಗಿ ಪ್ರಸಾದಕ್ಕಾಗಿ ಇಳಕಲ ಶ್ರೀಗಳು ಐದು ಸಾವಿರ ಶೇಂಗಾ ಹೋಳಿಗೆ, ಮುಚಳಂಬ ಶ್ರೀಗಳು ಜೋಳದ ಅನ್ನ ಹಾಗೂ ಅಂಬಲಿ ಮತ್ತು ಭಾಲ್ಕಿಯಿಂದ 20 ಸಾವಿರ ಜೋಳದ ರೊಟ್ಟಿ ಕಳುಹಿಸಿದ್ದಾರೆ ಎಂದರು.

ಅನುಭವ ಮಂಟಪದ ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಶಾಸಕ ಶರಣು ಸಲಗರ ಮಾತನಾಡಿ, 12ನೇ ಶತಮಾನದಲ್ಲಿ ಶರಣರು ನಡೆದಾಡಿದ ಪವಿತ್ರ ಹಾಗೂ ಪಾವನ ಕ್ಷೇತ್ರದ ಅನುಭವ ಮಂಟಪದಲ್ಲಿ ಎರಡು ದಿನಗಳ ಕಾಲ ನಡೆಯುವ ಈ ಉತ್ಸವ ಮಾನವ ಕುಲಕ್ಕೆ ಸಂಬಂಧಿಸಿದ ಉತ್ಸವವಾಗಿದೆ. ಇಡೀ ಮನುಕುಲಕ್ಕೆ ದಾರಿ ದೀಪವಾಗಿ ನೂತನ ಅನುಭವ ಮಂಟಪ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ. ಈ ಉತ್ಸವದಲ್ಲಿ ಶರಣರು ಮಾಡಿರುವ ಕ್ರಾಂತಿಯ ಕುರಿತು ಮಠಾಧೀಶರು ತಿಳಿಸಿಕೊಡಲಿದ್ದಾರೆ ಹೀಗಾಗಿ ಲಕ್ಷ,ಲಕ್ಷ ಬಸವ ಭಕ್ತರು ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕು ಎಂದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು, ಅನುಭವ ಮಂಟಪದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಆನಂದ ದೇವಪ್ಪಾ ಮಾತನಾಡಿದರು. ಈ ವೇಳೆ ಪ್ರಮುಖರಾದ ಬಸವಕಲ್ಯಾಣ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಜಕುಮಾರ ಬಿರಾದಾರ ಸಿರಗಾಪೂರ, ಮೇಘರಾಜ ನಾಗರಾಳೆ ಹಾರಕೂಡ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ರತಿಕಾಂತ ಕೊಹಿನೂರ ಸೇರಿದಂತೆ ಮತ್ತಿತರಿದ್ದರು.


43ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪದ ಉತ್ಸವದ ನಿಮಿತ್ಯ ಈಗಾಗಲೇ ನಗರದ ವಿವಿಧ ಬಡಾವಣೆಗಳಲ್ಲಿ ನಿತ್ಯ ಪ್ರಭಾತ ಪಥ ಸಂಚಲನ, ಸಾಯಂಕಾಲ ಪ್ರವಚನ ಸೇರಿದಂತೆ ವಚನ ಕಂಠ ಪಠ ಸ್ಪರ್ಧೆ, ಭಾಷಣ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಕೈಗೊಳ್ಳಲಾಗಿದೆ. ಅಲ್ಲದೆ ಶುಕ್ರವಾರ ವಿವಿಧೆಡೆಯ 20 ಕಡೆಗಳಿಂದ ಜ್ಯೋತಿ ಹೊತ್ತಿಸಿಕೊಂಡು ಬರಲಾಗುತ್ತಿದೆ. ಈ ಕಾರ್ಯಕ್ರಮ ಮಾಡುವುದರಿಂದ ಇಲ್ಲಿ ಬಿಕೆಡಿಬಿ ಆಗಿ ಈಗ ನೂತನ ಅನುಭವ ಮಂಟಪ ನಿರ್ಮಾಣವಾಗುತ್ತಿದೆ. ಹೀಗಾಗಿ ಅಂದಿನ ಕಾಲದ ಶರಣರ ಗತ ವೈಭವ ಮತ್ತೆ ಮರುಕಳಿಸಲು ನಾವೆಲ್ಲರೂ ಶ್ರಮಿಸಬೇಕಿದೆ.

ಶ್ರೀ ಗುರುಬಸವ ಪಟ್ಟದ್ದೇವರು

12ನೇ ಶತಮಾನದಲ್ಲಿ ಬಸವಣ್ಣನವರ ನೇತ್ರತ್ವದಲ್ಲಿ ಅನೇಕ ಶರಣರು ಸಮಾಜದ ಅಭಿವೃದ್ದಿಗಾಗಿ ಹೋರಾಟ ನಡೆಸಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ ಹೀಗಾಗಿ ಈ ಬಸವ ತತ್ವ ಮಾನವ ಏಳಿಗೆಗಾಗಿ ಶ್ರಮಿಸಿದ ತತ್ವವಾಗಿದೆ. ಹೀಗಾಗಿ ಅನುಭವ ಮಂಟಪದ ಪರಿಸರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮವನ್ನು ಬಸವ ಭಕ್ತರು ಒಂದಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಿದೆ.

ಆನಂದ ದೇವಪ್ಪಾ ಅನುಭವ ಮಂಟಪದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ


ಅನುಭವ ಮಂಟಪದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ವಿವಿಧ ಸ್ಥಳಗಳಿಗೆ ವಿವಿಧ ಹೆಸರಿಡಲಾಗಿದೆ. ಕಾರ್ಯಕ್ರಮ ಮಹಾದ್ವಾರಕ್ಕೆ ಬಾಬಾ ಸಾಹೇಬ ವಾರದ ಮಹದ್ವಾರ, ವೇದಿಕೆಗೆ ಡಾ.ಬಿ.ವ್ಹಿ ಪಟೇಲ ವೇದಿಕೆ ಹಾಗೂ ಪ್ರಸಾದ ಮಂಟಪಕ್ಕೆ ಶರಣೆ ಕಲ್ಯಾಣಮ್ಮ ಪ್ರಸಾದ ಮಂಟಪ ಎಂದು ಹೆಸರಿಡಲಾಗಿದೆ.