ಬಸವ ತತ್ವ ಪಾಲನೆಯಿಂದ ಸಮಾಜದ ಅಭಿವೃದ್ದಿ ಸಾಧ್ಯ: ಎಚ್.ಎಂ.ಗಣೇಶ್ ಪ್ರಸಾದ್

ಚಾಮರಾಜನಗರ, ಜೂ.10:- 12ನೇ ಶತಮಾನದಲ್ಲಿ ಬಸವಾದಿ ಶರಣರ ಚಿಂತನೆಗಳು ಇಂದಿಗೂ ಹೆಚ್ಚು ಪ್ರಸ್ತುತವಾಗಿದ್ದು, ಬಸವ ತತ್ವ ಪಾಲನೆಯಿಂದ ಸಮ ಸಮಾಜವನ್ನು ನಿರ್ಮಾಣ ಮಾಡಿ, ಅಭಿವೃದ್ದಿ ಪಥದತ್ತ ಸಾಗಲು ಸಾಧ್ಯವಿದೆ ಎಂದು ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ತಿಳಿಸಿದರು.
ನಗರದ ಮಹಾಮನೆಯಲ್ಲಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘ, ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘ ಹಾಗೂ ಸಂಗಮ ಗೃಹ ನಿರ್ಮಾಣ ಸಹಕಾರ ಸಂಘದ ಸಹಯೋಗದಲ್ಲಿ ನಡೆದ ಶರಣ ಚಿಂತನ – ಸಿಂಚನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಜಿಲ್ಲಾ ಕೇಂದ್ರದಲ್ಲಿರುವ ಮಹಾಮನೆಯು ಕಳೆದ 24 ವರ್ಷಗಳಿಂದ ಬಸವವಾದಿ ಶರಣ ಚಿಂತನೆಗಳು ಹಾಗೂ ಅವರ ವಚನಗಳನ್ನು ಪ್ರಚುರ ಪಡಿಸುವ ಜೊತೆಗೆ ಬಸವ ತತ್ವದ ಪಾಲನೆ ಮಾಡುತ್ತಿದ್ದಾರೆ. ಇಂಥ ಕಾರ್ಯಕ್ರಮಗಳು ಹೆಚ್ಚು ನಡೆದಾಗ ಜನರಲ್ಲಿ ಧರ್ಮದ ಬಗ್ಗೆ ಜಾಗೃತಿ ಮೂಡುತ್ತದೆ. ಅಂದು ಬಸವಣ್ಣ ಹಾಗು ಅನೇಕ ಶರಣರು ವೀರಶೈವ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡುವ ಜೊತೆಗೆ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಮೌಢ್ಯ, ಜಾತಿ ಪದ್ದತಿ ಸೇರಿದಂತೆ ಅನೇಕ ಅನಿಷ್ಟ ಆಚರಣೆ ಜಾತಿ ವ್ಯವಸ್ಥೆಯ ವಿರುದ್ದ ಅರಿವು ಮೂಡಿಸುವ ಜೊತೆಗೆ ಸಮ ಸಮಾಜವನ್ನು ನಿರ್ಮಾಣ ಮಾಡಲು ಮುಂದಾಗಿದ್ದರು. 21ನೇ ಶತಮಾನದಲ್ಲಿ ಇಂಥ ಕಾರ್ಯದಲ್ಲಿ ಮಹಾಮನೆಯ ಸದಸ್ಯರು ನಿರತವಾಗುವ ಮೂಲಕ ಯುವ ಪೀಳಿಗೆಗೆ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿದ್ದು, ಗುಂಡ್ಲುಪೇಟೆ ಕ್ಷೇತ್ರದ ಜನರು ಮತ್ತೆ ಮಹದೇವಪ್ರಸಾದ್ ಅವರ ಕುಟುಂಬಕ್ಕೆ ಅಧಿಕಾರ ನೀಡಬೇಕೆಂಬ ಹಂಬಲವನ್ನು ಹೊಂದಿ ನನ್ನನ್ನು ಹೆಚ್ಚಿನ ಬಹುಮತದಲ್ಲಿ ಆಯ್ಕೆ ಮಾಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುವ ಜೊತೆಗೆ ಸಮಾಜದ ಅಭಿವೃದ್ದಿಯಲ್ಲಿ ಸಹಕಾರ ಕೋರಿದರೆ, ಸ್ಪಂದಿಸುವುದಾಗಿ ತಿಳಿಸಿದರು,
ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ ಮಾತನಾಡಿ, ನೌಕರರ ಸಂಘವು 24 ವರ್ಷಗಳನ್ನು ಪೂರೈಸಿ ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುವತ್ತ ಸಾಗುತ್ತಿದೆ. ಗಡಿ ಜಿಲ್ಲೆಯಲ್ಲಿ ಬಸವ ತತ್ವವನ್ನು ಪ್ರಚುರ ಪಡಿಸುವ ಜೊತೆಗೆ ನೌಕರರಲ್ಲಿ ಒಗ್ಗಟ್ಟು ಮೂಡಿಸುವ ಸಲುವಾಗಿ ಸಂಘ ಸ್ಥಾಪನೆ ಆಯಿತು. ಅಲ್ಲಿಂದ ಆರಂಭಗೊಂಡು ಬಹಳಷ್ಟು ಉಪಯುಕ್ತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಪ್ರತಿಭಾ ಪುರಸ್ಕಾರ, ನೊಂದವರಿಗೆ ನೆರವು, ಆರೋಗ್ಯ ತಪಾಸಣೆ ಶಿಬಿರ, ಕಣ್ಣಿನ ತಪಾಸಣೆ ಶಿಬಿರ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಬಸವಾಧಿ ಶರಣ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡು ಸಮಾಜವನ್ನು ಅಭಿವೃದ್ದಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಸಂಘ ಅವಿರತವಾಗಿ ಶ್ರಮಿಸುತ್ತಿದೆ ಎಂದು ಸವಿಸ್ತಾರವಾಗಿ ವಿವರಣೆ ನೀಡಿದರು.
ಚಾ.ನಗರ ವಿರಕ್ತ ಮಠಾಧ್ಯಕ್ಷರಾದ ಶ್ರೀ ಚನ್ನಬಸವಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ನೌಕರರ ಸಂಘದ ಪದಾಧಿಕಾರಿಗಳು ಕೈಗೊಂಡಿರುವ ಜನಪಯುಕ್ತ ಕಾರ್ಯಕ್ರಮಗಳು ಇನ್ನು ಹೆಚ್ಚಿನ ರೀತಿಯಲ್ಲಿ ನಡೆಯಲಿ. ಬಸವಾಧಿ ಶರಣ ಅರ್ಶೀವಾದ ಅವರ ಮೇಲಿರಲಿ. ಅದೇ ರೀತಿ ನೂತನ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಹೆಮ್ಮೆ ತಂದಿದೆ. ಯುವ ಶಾಸಕರಾಗಿರುವ ಅವರು ಸಮಾಜದ ಬಗ್ಗೆ ಕಾಳಜಿಯನ್ನು ಹೊಂದಿದ್ದು, ಸಮಾಜದ ಬಂಧುಗಳು ಅವರ ಸಹಕಾರ,ನೆರವು ಪಡೆದುಕೊಂಡು ಅಭಿವೃದ್ದಿಯತ್ತ ಮುನ್ನಡೆಯಬೇಕು ಎಂದು ಅಶಿಸಿದರು.
ಇದೇ ಸಂದರ್ಭದಲ್ಲಿ ನೂತನ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಅವರನ್ನು ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು. ಇದಕ್ಕು ಮುನ್ನ ಸಹಾಯಕ ಪ್ರಾಧ್ಯಾಪಕ ಡಾ. ಬಿ.ಆರ್. ಜಯಣ್ಣ ವಚನಗಳಲ್ಲಿ ಜೀವನ ಮೌಲ್ಯಗಳು ಎಂಬ ವಿಚಾರ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಕೋಡಿಮೋಳೆ ರಾಜಶೇಖರ್, ಆರ್. ಪುಟ್ಟಮಲ್ಲಪ್ಪ, ಬಿ.ಕೆ. ರವಿಕುಮಾರ್, ಕೆರೆಹಳ್ಳಿ ನವೀನ್, ಹಿರಿಬೇಗೂರು ಗುರುಸ್ವಾಮಿ, ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಯೋಗ ಪ್ರಕಾಶ್, ನೌಕರರ ಸಂಘ ಉಪಾಧ್ಯಕ್ಷರಾದ ಮಹದೇವಸ್ವಾಮಿ ಐಟಿಐ, ಮಹೇಶ್ ಉಡಿಗಾಲ, ಪೊಲೀಸ್ ಗಂಗಾಧರ್, ಮಾದಲಾಂಬಿಕೆ, ಕಾರ್ಯದರ್ಶಿ ಅರ್ಕಪ್ಪ, ಖಜಾಂಚಿ ಮಹದೇವಸ್ವಾಮಿಕೊತ್ತಲವಾಡಿ, ನಿರ್ಮಲ, ಅಂಬಳೆ ನಂಜುಂಡಸ್ವಾಮಿ, ಪೊಲೀಸ್ ಕುಮಾರ್, ಹರವೆ ಮಹದೇವಸ್ವಾಮಿ, ಶಿವಕುಮಾರಸ್ವಾಮಿ, ಕಿರಣ್‍ರಾಜು, ಗುರುಸ್ವಾಮಿ, ಪರಶಿವಮೂರ್ತಿ, ಬಸವರಾಜಪ್ಪ, ಪೊಲೀಸ್ ಜಯಶಂಕರಮೂರ್ತಿ, ನಾಗಮಣಿ ಮೊದಲಾದವರು ಇದ್ದರು.