ಬಸವ ತತ್ವ ಪಾಲನೆಯಿಂದ ಮಾತ್ರ ಲಿಂಗಾಯತ ಧರ್ಮ ಉಳಿವು: ಮಹಾಂತ ಬಸವ ಲಿಂಗಸ್ವಾಮೀಜಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ. 07- ಬಸವಾದಿ ಶರಣರು ನೀಡಿರುವ ಸಂದೇಶ ಹಾಗೂ ಅವರು ಕೊಟ್ಟ ಲಿಂಗ ಪೂಜೆ ದೀಕ್ಷೆಯಿಂದ ಮಾತ್ರ ಬಸವ ಧರ್ಮ ಉಳಿಯಲು ಸಾಧ್ಯ, ಶರಣರು ವೈಚಾರಿಕ ಚಿಂತನೆಯನ್ನು ಬಿತ್ತುವ ನಿಟ್ಟಿನಲ್ಲಿ ಪ್ರೇರಣೆ ನೀಡಬೇಕು ಎಂದು ದೆಹಲಿಯÀ ಶ್ರೀ ಡಾ. ಮಹಾಂತ ಬಸವಲಿಂಗ ಸ್ವಾಮೀಜಿ ತಿಳಿಸಿದರು.
ನಗರದ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಅದ್ದೂರಿಯಾಗಿ ಎರಡು ದಿನಗಳ ಗ್ರಾಮಾಂತರ ಬಸವ ಜಯಂತೋತ್ಸವ ಮತ್ತು ಪೂಜ್ಯದ್ವಯರ ಸಂಸ್ಮರಣೋತ್ಸವ, ಬಸವ ಪುತ್ಥಳಿ ಮೆರವಣಿಗೆ ಕಾರ್ಯಕ್ರಮದಲ್ಲಿ ಆಯೋಜನೆ ಮಾಡಿದ್ದ ವಿಶೇಷ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಬಸವಾದಿ ಶರಣರು ಸ್ಥಾಪಿಸಿದ ಲಿಂಗಾಯತ ಧರ್ಮ ಎತ್ತ ಸಾಗುತ್ತಿವೆ ಎಂಬ ಪ್ರಶ್ನೆಯನ್ನು ನಾವು, ನೀವು ಎಲ್ಲರು ಹಾಕಿಕೊಳ್ಳಬೇಕಾಗಿದೆ. ಬಸವಣ್ಣ ಕೊಟ್ಟ ಇಷ್ಟ ಲಿಂಗ ಪೂಜೆ ನಡೆಯುತ್ತಿಲ್ಲ. ವಿಭೂತಿ ಧರಿಸಲು ಹಿಂಜರಿಕೆ, ಲಿಂಗಾ ಪೂಜೆ ಮಾಡಲು ಸಮಯವಿಲ್ಲ ಎನ್ನುವ ತಾತ್ಸಾರ ಹಾಗೂ ಮಕ್ಕಳಿಗೆ ಬಸವ ತತ್ವದ ಹಾಗು ಧರ್ಮ ಬಗ್ಗೆ ಪರಿಕಲ್ಪನೆಯನ್ನು ತಿಳಿಸದಿರುವುದು. ಅಲ್ಲದೇ ತಾಯಿಂದಿರು ಮನೆಯಲ್ಲಿ ಧರ್ಮ ಪಾಲನೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕಾಗಿದೆ. ಇವೆಲ್ಲರು ಪರಿಪೂರ್ಣವಾಗಿ ಪಾಲನೆ ಮಾಡಿದಾಗ ಮಾತ್ರ ಧರ್ಮ ಉಳಿಯಲು ಸಾಧ್ಯವಿದೆ ಎಂದರು.
ವಿರಕ್ತ ಮಠಗಳು ಹಾಗೂ ದಾಸೋಹ ಮಠಗಳು ಬಸವಾದಿ ಶರಣರು ಧರ್ಮ ಪ್ರಚಾರಕ್ಕಾಗಿ ಕಟ್ಟಿಕೊಟ್ಟ ಆಧ್ಯಾತ್ಮಿಕ ಕೇಂದ್ರಗಳು. ಬಸವಾದಿ ಶರಣರ ಪ್ರವಚನ,ಅವರ ತತ್ವ ಆಚರಣೆಯನ್ನು ಮಾಡುವ ಜೊತೆಗೆ ಸಮಾಜವನ್ನು ಸರಿ ದಾರಿಗೆ ತರಲು ಶರಣರು ಇಂಥ ಮಠಗಳನ್ನು ಸ್ಥಾಪನೆ ಮಾಡಿ, ಧರ್ಮ ಪ್ರಚಾರದ ಕಾಯಕದಲ್ಲಿ ತೊಡಗಿಕೊಂಡರು. ಇಂತ ಜಗತ್ ವಿಖ್ಯಾತಿ ಧರ್ಮದಲ್ಲಿ ಹುಟ್ಟಿರುವ ನಾವು ನೀವು ಎಲ್ಲರು ಲಿಂಗಾಯತ ಧರ್ಮ ಪಾಲನೆ ಮಾಡಲು ಮುಂದಾಗಬೇಕು. ಬೆಳಗ್ಗೆ ಏಳುತ್ತಿದ್ದಂತೆ ಬಸವ, ಗುರು ಬಸವಾಲಿಂಗಾಯ ನಮಃ ಪ್ರಾರ್ಥನೆಯೊಂದಿಗೆ ಬಸವಾದಿ ಶರಣರಾದ ಬಸವಣ್ಣ, ಮಹದೇಶ್ವರರು, ಗುರುಮಲ್ಲೇಶ್ವರರು, ಸಿದ್ದಲಿಂಗೇಶ್ವರರು, ಅಕ್ಕ ಮಹದೇವಿ ಸೇರಿದಂತೆ ಅನೇಕ ಶರಣರು ಭಾವಚಿತ್ರಗಳನ್ನು ಮನೆಯಲ್ಲಿಟ್ಟು ಪೂಜೆ ಸಲ್ಲಿಸುವ ಜೊತೆಗೆ ಅವರ ವಚನಗಳು ಮತ್ತು ತತ್ವವನ್ನು ಪಾಲನೆಮಾಡಬೇಕು ಎಂದರು.
ಇಷ್ಟ ಲಿಂಗ ಪೂಜೆ ಮಾಡುವ ಬದಲು ಶಕ್ತಿ ದೇವತೆಗಳು ಪೋಟೋ ಪೂಜೆ ಮಾಡಿದರೆ, ಬಸವಣ್ಣ ಒಪ್ಪವನೇ ಸಮಾಜದಲ್ಲಿದ್ದ ಮೌಢ್ಯ, ಕಂದಾಚಾರವನ್ನು ತೆಗೆದುಕೊಂಡು ಸಮ ಸಮಾಜ ನಿರ್ಮಾಣದ ಜೊತೆಗೆ ಪರಿಶುದ್ದವಾದ ಲಿಂಗಾಯತ ಧರ್ಮವನ್ನು ನಮಗೆ ನೀಡಿದ್ದಾರೆ. ಅದನ್ನು ಪಾಲನೆ ಮಾಡುವ ಮೂಲಕ ಮಠಮಾನ್ಯಗಳಿಗೆ ಇಂಥ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಶಕ್ತಿ ತುಂಬಬೇಕು. ತುಮಕೂರಿನಲ್ಲಿರುವ ಸಿದ್ದಗಂಗಾ ಮಠದ ಮಾದರಿಯಲ್ಲಿ ಚಾನಗರ ಸಿದ್ದಮಲ್ಲೇಶ್ವರ ಮಠವನ್ನು ಉತ್ತಂಗಕ್ಕೆ ತರುವ ಶಕ್ತಿ ಭಕ್ತರಾದ ನಿಮಗೆ ಇದೆ. ಇಬ್ಬರು ಸ್ವಾಮಿಗಳಾದ ಮರಿಯಾಲಶ್ರೀಗಳು, ನಗರಶ್ರೀಗಳ ಜೋಡಿ ಬಹಳ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಣೆ ಮಾಡಿದೆ. ಅವರಿಗೆ ಸಾಧನೆ ಮಾಡುವ ಶಕ್ತಿ ಎಂದು ಮಹಾಂತ ಬಸವಲಿಂಗಸ್ವಾಮೀಜಿ ಪ್ರಶಂಸೆ ವ್ಯಕ್ತಪಡಿಸಿದರು.
ಶ್ರೀಮಠದ ಅಧ್ಯಕ್ಷರಾದ ಶ್ರೀ ಚನ್ನಬಸವಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಬಹಳ ವರ್ಷಗಳಿಂಗ ಗ್ರಾಮಾಂತರ ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಇದು ಭಕ್ತರಾದ ನಿಮ್ಮೇಲ್ಲರ ಸಹಕಾರದಿಂದ ನಡೆಯುತ್ತಿದೆ. ಮೇ 21 ರಂದೇ ಕಾರ್ಯಕ್ರಮ ನಡೆಯಬೇಕಾಗಿತ್ತು. ಆದರೆ, ಮಳೆಯ ಕಾರಣ ಮುಂದೂಡಲಾಗಿತ್ತು. ಈ ಮಳೆರಾಯ ನಮ್ಮ ಮನವಿ ಸ್ಪಂದಿಸಿ, ಬಿಡುವು ನೀಡಿದ್ದಾರೆ. ಸಂಜೆ ನಾಟಕ ಬಹಳ ಅಚ್ಚುಕಟ್ಟಾಗಿ ಬಸವಾದಿ ಶರಣ ಜೀವನ ಚರಿತ್ರೆ ಮೂಡಿ ಬಂತು. ಇಂದು ಸಹ ಮೆರವಣಿಗೆ ಹಾಗು ಪ್ರಸಾದ ವ್ಯವಸ್ಥೆ ಚೆನ್ನಾಗಿ ಆಗುತ್ತಿದೆ. ಎಲ್ಲರು ಸಹ ಪ್ರಸಾದ ಸ್ವೀಕರಿಸಿ ಹೋಗಬೇಕು. ಅಲ್ಲದೇ ನಮ್ಮ ಧರ್ಮ ಮತ್ತು ಸಂಸ್ಕøತಿಯನ್ನು ಕಾಪಾಡುವ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೆ ಬಸವ ಧರ್ಮ ಮತ್ತು ಲಿಂಗಾಯತ ಧರ್ಮ ಪ್ರಮುಖ್ಯತೆಯನ್ನು ತಿಳಿಸಬೇಕು. ವಿಶೇಷವಾಗಿ ಯುವ ಜನಾಂಗ ದಾರಿ ತಪ್ಪಿದಂತೆ ಸಮಾಜವನ್ನು ಕಟ್ಟು ನಿಟ್ಟಿನಲ್ಲಿ ಎಲ್ಲರು ಚಿಂತನೆ ಮಾಡೋಣ. ಧರ್ಮ ಉಳಿದರೆ ನಾವು ನೀವು ಉಳಿಯುತ್ತೇವೆ. ಹೀಗಾಗಿ ಎಲ್ಲರು ಸಹ ಬಸವ ಧರ್ಮ ಚಿಂತನೆ ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳೊಣ ಎಂದರು.
ಮೂವರು ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಹೆಚ್ಚು ಅಂಕಗಳಿಸಿದ ಮೂವರು ಸಾಧಕರಾದ ಎಂಎಸ್ಸಿಯಲ್ಲಿ ಗಣಿತ ವಿಷಯದಲ್ಲಿ ಪ್ರಥಮ ರ್ಯಾಂಕ್ ಹಾಗೂ ಚಿನ್ನದ ಪದಕ ವಿಜೇತೆ ಎಂ. ಪ್ರತೀಕ್ಷ ಮಹೇಂದ್ರ ಕುಮಾರ್, ಎಂಎಸ್ಸಿ ಚಿನ್ನದ ಪದಕ ಪಡೆದ ಇಂಚರ ಮಂಜುನಾಥ್, ಪಿಯುಸಿಯಲ್ಲಿ ಜಿಲ್ಲೆಗೆ ಟಾಫರ್ ಆದ ನಿಶ್ವಿತಾಶಿವಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮರಿಯಾಲದ ಶ್ರೀ ಇಮ್ಮಡಿ ಮರುಘರಾಜೇಂದ್ರಸ್ವಾಮೀಜಿ, ಮೂಡಗೂರು ಮಠದ ಇಮ್ಮಡಿ ಉದ್ದಾನಸ್ವಾಮೀಜಿ, ಕಬ್ಬಳ್ಳೀ ಮಠದ ಶ್ರೀ ಗುರು ಸಿದ್ದಸ್ವಾಮೀಜಿ. ಶಿವಕುಮಾರಪುರ ಮಹಾಂತಸ್ವಾಮೀಜಿ, ಮೇಲಾಜಿಪುರ ಶಿವಬಸವ ಸ್ವಾಮೀಜಿ ಉಪಸ್ಥಿತರಿದ್ದರು.
ವಿಜೃಂಭಣೆಯ ಮೆರವಣಿಗೆ: ಬೆಳಗ್ಗೆ 10 ಗಂಟೆಗೆ ಬೆಳ್ಳಿ ರಥದಲ್ಲಿ ಶ್ರೀ ಬಸವೇಶ್ವರ ಪುತ್ಥಳಿ ಮೆರವಣಿಗೆಗೆ ವಿಜೃಂಭನೆಯಿಂದ ನಡೆಯಿತು. ಪ್ರಮುಖ ಬೀದಿಗಳಲ್ಲಿ ನಂದಿ ಧ್ವಜ, ವೀರಗಾಸೆ, ಭಜನೆ ಹಾಗೂ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಸಾಯಂಕಾಲ ಗಂಟೆಗೂ ನಡೆಯಿತು. ಯುವಕರು ಡಿಜೆ ಸೌಂಡ್‍ಗೆ ಕುಣಿದು ಕುಪ್ಪಳಿಸಿದರು.