ಬಸವ ತತ್ವದ ಅಳವಡಿಕೆಯಿಂದ ಜಾಗತಿಕ ಸಮಾನತೆ ಸಾಧ್ಯ

ಕಲಬುರಗಿ,ಏ.21: ಬಸವಾದಿ ಶರಣರು ನೀಡಿರುವ ಜಾತಿ, ವರ್ಗ, ವರ್ಣ ರಹಿತ, ಸರ್ವ ಸಮಾನತೆ ಒಳಗೊಂಡ ಕಲ್ಯಾಣ ರಾಷ್ಟ್ರದ ನಿರ್ಮಾಣ, ಕಾಯಕ, ದಾಸೋಹ, ದಯೆ, ಶಾಂತಿಯ ಅಳವಡಿಕೆ, ಕಳ್ಳತನ ಕೊಲೆ, ಸುಲಿಗೆ, ಭ್ರಷ್ಟಾಚಾರ,ಅನ್ಯಾಯ, ಶೋಷಣೆ, ಭಯೋತ್ಪಾದನೆ, ಅತ್ಯಾಚಾರ ಮಾಡದಿರುವುದು, ಸಕಲ ಜೀವರಾಶಿಗಳಿಗೆ ಲೇಸನ್ನೇ ಬಯಸುವ ಬಸವ ತತ್ವದ ಅಳವಡಿಕೆಯಿಂದ ಜಾಗತಿಕ ಮಟ್ಟದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಉಂಟಾಗಿ, ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಹೇಳಿದರು.
ನಗರದ ರಾಜಾಪೂರ ರಸ್ತೆಯಲ್ಲಿರುವ ಶ್ರೀಮತಿ ಎಂ.ಸಿ. ವಸಂತ ಬಿ.ಎಡ್. ಕಾಲೇಜಿನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ 890ನೇ ಬಸವ ಜಯಂತಿ ಜರುಗುತ್ತಿರುವ ಸರಣಿ ಕಾರ್ಯಕ್ರಮ-9ನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಎಚ್.ಬಿ.ಪಾಟೀಲ, ವಿಶ್ವಗುರು ಬಸವಣ್ಣನವರು ಶ್ರೇಷ್ಠ ಸಮಾಜ ಸುಧಾರಕರು, ಅರ್ಥಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು, ರಾಜ್ಯಶಾಸ್ತ್ರಜ್ಞರು, ಮನೋಶಾಸ್ತ್ರಜ್ಞರು, ವಿಜ್ಞಾನಿ, ತತ್ವಜ್ಞಾನಿ, ಸ್ವತಂತ್ರ ವಿಚಾರವಾದಿ, ವಚನಚಳುವಳಿಯ ನೇತಾರ, ದಾರ್ಶನಿಕ, ಮಹಿಳಾ ಸಬಲೀಕರಣದ ರೂವಾರಿ, ಜಗತ್ತಿನ ಸಕಲ ಜೀವರಾಶಿಗಳಿಗೆ ಲೇಸನ್ನೇ ಬಯಸಿದ ಮಹಾನ ಶಕ್ತಿಯಾಗಿದ್ದಾರೆ. ಎಲ್ಲರನ್ನು ಒಂದೇ ವೇದಿಕೆಯಡಿ ಸೇರಿಸುವ ಮೂಲಕ ‘ಕಲ್ಯಾಣ ರಾಷ್ಟ್ರ’ವನ್ನು ನಿರ್ಮಾಣ ಮಾಡಿದ್ದಾರೆ. ಜಾಗತಿಕ ಮಟ್ಟದಲ್ಲಿ ನಿಲ್ಲಬಲ್ಲ ಬಸವ ತತ್ವ ವಿಶ್ವಮಾನ್ಯ, ಸಾರ್ವಕಾಲಿಕ, ಅನುಕರಣೀಯವಾಗಿದೆ ಎಂದು ಅನೇಕ ವಚನಗಳೊಂದಿಗೆ ಸುಧೀರ್ಘವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಹಿರಿಯ ಸದಸ್ಯ ಶಿವಯೋಗಪ್ಪ ಬಿರಾದಾರ, ಕಾಲೇಜಿನ ಪ್ರಾಂಶುಪಾಲ ಡಾ.ಶರಣಗೌಡ ಸಂಗಾಲಕ್, ಪ್ರೊ.ಬಸವರಾಜ ಮಳ್ಳಿ, ಪ್ರೊ.ಮೌನೇಶ ಅಕ್ಕಿ, ಪ್ರೊ.ಜಗದೇವಿ ಬಿರಾದಾರ, ಪ್ರೊ.ಅನಿತಾ ಹಾಗೂ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.