ಬಸವ ಜಯಂತಿ ಹುಟ್ಟು ಹಾಕಿದ ಹರ್ಡೇಕರ ಮಂಜಪ್ಪನವರು

ಬಸವನಬಾಗೇವಾಡಿ:ಮಾ.2:ಕರ್ನಾಟಕ ಗಾಂಧಿ ಲಿಂ. ಹರ್ಡೇಕರ ಮಂಜಪ್ಪನವರು 1913 ರಲ್ಲಿ ಬಸವ ಜಯಂತಿಯನ್ನು ಹಾಗೂ 1935 ರಲ್ಲಿ ಅಕ್ಕವiಹಾದೇವಿಯವರ ಜಯಂತಿಯನ್ನು ಹುಟ್ಟು ಹಾಕದೇ ಇದ್ದಿದ್ದರೆ ಜಗತ್ತಿಗೆ ಅವರಿರ್ವರ ಕೀರ್ತಿ ಪ್ರಖರಗೊಳ್ಳುತ್ತಿರಲಿಲ್ಲವೆಂದು ವಿಜಯಪುರದ ಸಾಹಿತಿ, ಡಾ. ಮಲ್ಲಿಕಾರ್ಜುನ ಮೇತ್ರಿ ಹೇಳಿದರು.
ಇಲ್ಲಿನ ನಂದಿ ಸಾಹಿತ್ಯ ಸಾಹಿತ್ಯ ವೇದಿಕೆ ವಿರಕ್ತಮಠದಲ್ಲಿ ಫೆ. 26 ರಂದು ಲಿಂ.ಹರ್ಡೇಕರ ಮಂಜಪ್ಪನವರ ಜಯಂತಿ, ಹರ್ಡೇಕರರ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಸನ್ಮಾನ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ಮಂಜಪ್ಪನವರು ಬಸವ ಜಯಂತಿ ಹುಟ್ಟು ಹಾಕಿದ ಹಿನ್ನೆಲೆ ಮತ್ತು ಅರ್ಥ ವಿಶಿಷ್ಟವಾದುದು. ಅಂತೆಯೇ ನಾನವರ ಕುರಿತಾಗಿ ಪಿಎಚ್‍ಡಿ ಮಾಡಿದೆ. ಸಂಶೋಧಕ ಡಾ. ಕಲಬುರ್ಗಿಯವರು ನನಗೆ ಸ್ಪೂರ್ತಿ ತುಂಬಿದರು. 1911 ರಲ್ಲಿ ಬಸವ ಜಯಂತಿ ಆಚರಿಸಬೇಕೆಂಬ ಉದ್ದೇಶ ಕೊನೆಗೆ ಮಂಜಪ್ಪನವರಿಗೆ 1913 ರಲ್ಲಿ ಈಡೇರಿತು. ದಾವಣಗೆರೆಯ ಮೃತ್ಯುಂಜಯಶ್ರೀಗಳಿಗೆ ಬಸವ ಜಯಂತಿ ಆಚರಿಸುವ ಬಗ್ಗೆ ಮಂಜಪ್ಪನವರು ತಿಳಿಸಿದಾಗ ಅದಕ್ಕವರು ಒಪ್ಪಿದರು. ಹರ್ಡೇಕರರು ಶ್ರಮಪಟ್ಟು ಬಸವ ಜಯಂತಿ ಆಚರಿಸದೇ ಇದ್ದಿದ್ದರೆ ಈಗಲೂ ಎತ್ತುಗಳನ್ನೇ ಬಸವಣ್ಣನೆಂದು ಪೂಜೆಗೈಯುವ ಸಂಪ್ರದಾಯ ಇರುತ್ತಿತ್ತೆಂದರು.
ಶಿಸ್ತು ಮಂಜಪ್ಪನವರ ಗುಣವಾಗಿತ್ತು. ಪತ್ರಕರ್ತರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, 80 ಕ್ಕೂ ಅಧಿಕ ಪುಸ್ತಕ ಬರೆದು ಮಹತ್ಸಾಧನೆ ಮಾಡಿದ್ದಾರೆ. ಬಸವ ಜನ್ಮಸ್ಥಳ ಬಸವನಬಾಗೇವಾಡಿಲ್ಲಿಂದು ಅವರ ಜಯಂತಿ ಆಚರಣೆಗೊಂಡಿದ್ದು ಬಹು ವಿಶೇಷ. ಬಸವ ಜಯಂತಿ ಹುಟ್ಟು ಹಾಕಿದವನ ಜಯಂತಿಯನ್ನು ನಂದಿ ಸಾಹಿತ್ಯ ವೇದಿಕೆ ಬಸವ ಜನ್ಮಸ್ಥಳದಲ್ಲಿ ಆಚರಿಸಿದ್ದು ಸಾಧನೆ. ಆಲಮಟ್ಟಿಯಲ್ಲಿ ಮಂಜಪ್ಪನವರ ಭವನ ನಿಸರ್ಗ ಪರಿಸರದಲ್ಲಿದೆ. ತೋಂಟದಾರ್ಯಶ್ರೀಗಳು ಹರ್ಡೇಕರರ ಬಗ್ಗೆ ಅತೀ ಕಾಳಜಿಪೂರ್ವಕ ಕಾರ್ಯ ಮಾಡಿದ್ದಾರೆಂದರು.
ಬಸವ ಜಯಂತಿ ಹುಟ್ಟು ಹಾಕಿದ ಹರ್ಡೇಕರ ಮಂಜಪ್ಪನವರ ಸ್ಮರಣೆ ಕಾರ್ಯಕ್ರಮವನ್ನು ಪ್ರತಿ ಬಸವ ಜಯಂತಿ ಕಾರ್ಯಕ್ರಮದಂದು ಆಚರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ನಂದಿ ಸಾಹಿತ್ಯ ವೇದಿಕೆ ಅಧ್ಯಕ್ಷ ಮಹಾಂತೇಶ ಸಂಗಮ ಅವರು ಪತ್ರ ಬರೆದು ಆಗ್ರಹಿಸಿದುದಕ್ಕೆ ತಮ್ಮ ಸಹಮತವಿದೆ ಎಂದು ಮೇತ್ರಿ ಹೇಳಿದರು.
ವೇದಿಕೆ ಅಧ್ಯಕ್ಷ, ಸಾಹಿತಿ ಮಹಾಂತೇಶ ಸಂಗಮ ಮಾತನಾಡಿ, ಪ್ರತಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸರಕಾರ ಬಸವ ಜಯಂತಿ ಹುಟ್ಟು ಹಾಕಿದ ಹರ್ಡೇಕರ ಮಂಜಪ್ಪನವರ ಸ್ಮರಣೆ ಕಾರ್ಯಕ್ರಮ ನಡೆಸಬೇಕು. ಈ ವಿಷಯವಾಗಿ ಫೆ. 25 ರಂದು ಮುಖ್ಯಮಂತ್ರಿಗಳಿಗೆ, ಕಂದಾಯ ಸಚಿವರಿಗೆ, ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸೇರಿ 10 ಜನರಿಗೆ ಲಿಖಿತ ಪತ್ರ ಕಳುಹಿಸಿದ್ದೇನೆ. ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿ ಅವರ ಕಾರ್ಯಕ್ರಮ ನಡೆಸಲಾಗುತ್ತದೆ. ಆದರೆ, ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮಾ ಗಾಂಧೀಜಿಯವರ ಜಯಂತಿಯೂ ದೇಶದಲ್ಲಿ ಭಾವಚಿತ್ರ ಮೆರವಣಿಗೆ, ಅವರ ಹೋರಾಟದ ಬಗೆ ಸೇರಿ ಸಾಧನೆ ಸಾರುವ ಕೆಲಸವಾಗಬೇಕು. ಇದಕ್ಕಾಗಿ ಕೇಂದ್ರ ಸರಕಾರ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಹಾಗೆಯೇ ಬಸವ ಜಯಂತಿ ಆಚರಣೆ ಎಲ್ಲೆಡೆ ಆಗುತ್ತದೆ. ಆದರೆ, ಬಸವ ಜಯಂತಿ ಹುಟ್ಟು ಹಾಕಿದ ಹರ್ಡೇಕರರ ಜಯಂತಿ ಮೆರವಣಿಗೆಯೊಂದಿಗೆ ಅದ್ಧೂರಿಯಾಗಿ ಆಚರಣೆಯಾಗುವುದಿಲ್ಲ. ಈ ಬಗ್ಗೆ ಸರಕಾರ ಹೆಚ್ಚು ಗಮನ ಹರಿಸಬೇಕು. ಹರ್ಡೇಕರರ ಕರ್ಮಭೂಮಿ ಆಲಮಟ್ಟಿ ಶಾಸ್ತ್ರೀ ಸಾಗರದ ಉದ್ಯಾನದಲ್ಲಿ ಹರ್ಡೇಕರರ ಜೀವನ ಸಾಧನೆ ಸಾರುವ ಶಿಲಾಕೃತಿಗಳು ಮೈದಳೆಯಬೇಕು ಎಂದರು.
ನಿಡಗುಂದಿಯ ವಿ.ಎಂ.ಪಟ್ಟಣಶೆಟ್ಟಿ ಮಾತನಾಡಿ, ಮಂಜಪ್ಪನವರ ಬಗ್ಗೆ ಕೆಲಸ ಮಾಡುವುದೆಂದರೆ ಬಹು ಹೆಮ್ಮೆ. ಇಂದಿನ ಕಾರ್ಯಕ್ರಮ ನನಗೆ ಬಹಳ ಸಂತಸ ತಂದುಕೊಟ್ಟಿದೆ. ಬಸವ ಜಯಂತಿ ಹುಟ್ಟು ಹಾಕಿದವನ ಜಯಂತಿಯನ್ನಿಲ್ಲಿ ಆಚರಿಸಿದ್ದು ಅಭಿಮಾನ ಪಡುವ ಸಂಗತಿ ಎಂದರು. ಸಾನ್ನಿಧ್ಯವಹಿಸಿದ್ದ ವಿರಕ್ತಮಠದ ಸಿದ್ದಲಿಂಗಶ್ರೀ ಆಶೀರ್ವಚನ ನೀಡಿದರು. ಅಧ್ಯಕ್ಷತೆವಹಿಸಿದ್ದ ವೇದಿಕೆ ಉಪಾಧ್ಯಕ್ಷ ಎಸ್.ಎಂ. ಸಜ್ಜನ ಮಾತನಾಡಿದರು. ವೇದಿಕೆಯಲ್ಲಿ ಪ್ರಗತಿಪರ ರೈತ ಬಸವರಾಜ ಹಾರಿವಾಳ ಇದ್ದರು.
ಭಾವಚಿತ್ರ ಮೆರವಣಿಗೆ:==
ಬೆಳಗ್ಗೆ ಬಸವೇಶ್ವರ ದೇವಸ್ಥಾನದಿಂದ ಹರ್ಡೇಕರ ಮಂಜಪ್ಪನವರ ಭಾವಚಿತ್ರ ಮೆರವಣಿಗೆ ಡೊಳ್ಳು, ಬ್ಯಾಂಡ್ ಮೂಲಕ ವಿರಕ್ತಮಠದವರೆಗೆ ನಡೆಯಿತು. ಮೆರವಣಿಗೆಯಲ್ಲಿ ಭಾಗಿಯಾದ ಶಾಲಾ ಮಕ್ಕಳು ಬಸವ ಜಯಂತಿ ಹುಟ್ಟು ಹಾಕಿದ ಹರ್ಡೇಕರ ಮಂಜಪ್ಪನವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು. ವೀರಶೈವ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಬಸವರಾಜ ಗೊಳಸಂಗಿ, ವೇದಿಕೆ ಕಾರ್ಯದರ್ಶಿ ಸಿದ್ದು ಬಾಗೇವಾಡಿ ಭಾವಚಿತ್ರಕ್ಕೆ ಪೂಜೆಯೊಂದಿಗೆ, ಪುಷ್ಪಾರ್ಚನೆಗೈದು ಮೆರವಣಿಗೆಗೆ ಚಾಲನೆ ನೀಡಿದರು. ವಿದ್ಯಾರ್ಥಿ ಹರೀಶ ನಾಟೀಕಾರ ಮಂಜಪ್ಪನವರ ವೇಷಧಾರಿಯಾಗಿದ್ದರು. ಮೆರವಣಿಗೆಯಲ್ಲಿ ಬಿ.ವಿ.ಚಕ್ರಮನಿ, ಶಿವು ಮಡಿಕೇಶ್ವರ, ಬಿ.ಬಿ.ಚಿಂಚೋಳಿ, ಪಿ.ಜಿ.ಕುಲಕರ್ಣಿ, ಎನ್.ಎಸ್.ಯರನಾಳ, ಮಹೇಶ ಸಂಗಮ, ಸುಭಾಸ ಹಡಪದ, ಅರುಂಧತಿ ಹತ್ತಿಕಾಳ, ಶಿವಾಜಿ ಮೋರೆ, ಎಂ.ಎಸ್.ಅವಟಿ, ಸೋಮಲು ಲಮಾಣಿ, ಎಚ್.ಎಸ್.ಬಿರಾದಾರ, ಡಾ. ಎಸ್.ಎಸ್.ಝಳಕಿ, ಡಾ. ಮಹಾಂತೇಶ ಮಡಿಕೇಶ್ವರ, ಸಾವಿತ್ರಿ ಕಲ್ಯಾಣಶೆಟ್ಟಿ, ಗಿರಿಜಾ ಪಾಟೀಲ, ದೈಹಿಕ ಶಿಕ್ಷಣಾಧಿಕಾರಿ ಬಸೆಟ್ಟಿ, ಸುರೇಶ ಬಾಳಿಕಾಯಿ, ಭಾವಿಕಟ್ಟಿ, ಆಲಮಟ್ಟಿ ಗ್ರಾಪಂ ಅಧ್ಯಕ್ಷ ಮಂಜುನಾಥ ಹಿರೇಮಠ, ಚಂದ್ರಶೇಖರ ಮೇಲಿನಮನಿ, ಪಿ.ಎ.ಓಲೇಕಾರ, ಈರಣ್ಣ ಬೆಕಿನಾಳ, ಬಿ.ಎಸ್.ಬಿರಾದಾರ, ಆರ್.ಎಸ್.ಡೋಣೂರ, ಪುಷ್ಪ ಹೂಗಾರ, ಎಸ್.ಆರ್.ಹೂಗಾರ ಸೇರಿ ಇತರರಿದ್ದರು. ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹರ್ಡೇಕರರ ವೇಷಧಾರಿ ಹರೀಶ ನಾಟೀಕಾರ ಹಾಗೂ ಮಂಜಪ್ಪನವರ ಮೂರ್ತಿ ಗ್ರಾಪಂ ಎದುರು ಅನಾವರಣಗೊಳಿಸಲು ಕ್ರಮ ಕೈಗೊಂಡ ಆಲಮಟ್ಟಿ ಗ್ರಾಪಂ ಅಧ್ಯಕ್ಷ ಮಂಜುನಾಥ ಹಿರೇಮಠ ಇತರರನ್ನು ಸನ್ಮಾನಿಸಲಾಯಿತು.