ಬಸವ ಜಯಂತಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶದ ಭಾಗಗಳಲ್ಲಿ ಆಚರಿಸಲ್ಪಡುವ ಅತ್ಯಂತ ವಿಶೇಷತೆಯನ್ನು ಒಳಗೊಂಡ ದಿನಃ ಪ್ರದೀಪ ಕತ್ತಿ

ಸಿಂದಗಿ, ಮೇ.15-ಬಸವ ಜಯಂತಿಯನ್ನು 12 ನೇ ಶತಮಾನದ ಕವಿ, ದಾರ್ಶನಿಕ ಮತ್ತು ಲಿಂಗಾಯತ ಎಂಬ ಪರಿಕಲ್ಪನೆಯ ಸ್ಥಾಪಕ ಸಂತ ಭಗವಾನ್ ಬಸವಣ್ಣನವರ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಲಿಂಗಾಯತ ಸಮುದಾಯದ ಜನರು ಹೆಚ್ಚಾಗಿ ಆಚರಿಸುತ್ತಾರೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಭಾಗಗಳಲ್ಲಿ ಹೆಚ್ಚಿನ ಅಭಿಮಾನಿಗಳೊಂದಿಗೆ ಆಚರಿಸಲ್ಪಡುವ ಈ ದಿನ ಅತ್ಯಂತ ವಿಶೇಷತೆಯನ್ನು ಒಳಗೊಂಡ ದಿನವಾಗಿದೆ ಎಂದು ಸಿ.ಎಂ.ಮನಗೂಳಿ ಕಾಲೇಜಿನ ಪ್ರಾಧ್ಯಾಪಕ ಪ್ರದೀಪ ಕತ್ತಿ ಹೇಳಿದರು.
ಪಟ್ಟಣದ ಕಚೇರಿಯಲ್ಲಿ ಕರ್ನಾಟಕ ಜನಸ್ಪಂದನ್ ಟ್ರಸ್ಟ್ ವಿಜಯಪುರ ಜಿಲ್ಲಾ ಹಾಗೂ ತಾಲೂಕಾ ಘಟಕದವತಿಯಿಂದ ವಿಶ್ವಗುರು ಬಸವಣ್ಣನವರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿ, ಈ ದಿನದಂದು ಜನರು ಶುಭಾಶಯದ ಸಂದೇಶವನ್ನು ಪರಸ್ಪರ ಕೋರುತ್ತಾರೆ. ಈ ಶುಭಾಶಯದ ಸಂದೇಶಗಳು ಬಸವಣ್ಣನವರ ವಚನಗಳ ರೂಪದಲ್ಲಿರುತ್ತದೆ ಎನ್ನುವುದು ಮತ್ತೊಂದು ವಿಶೇಷ. ಆ ಮೂಲಕ ಅವರ ಬೋಧನೆಗಳು ಮತ್ತು ವಚನಗಳನ್ನು ಪಠಿಸುತ್ತಾರೆ ಮತ್ತು ಬಸವಣ್ಣನವರನ್ನು ಸ್ಮರಿಸುತ್ತಾರೆ. ‘ವಾಸುದೈವ ಕುಟುಂಬಕಂ’ (ಸಾರ್ವತ್ರಿಕ ಭ್ರಾತೃತ್ವ) ಸಂದೇಶವನ್ನು ರವಾನಿಸುವುದು ಬಸವ ಜಯಂತಿಯ ಉದ್ದೇಶ. ದೇವರು ಮತ್ತು ಜೀವನವನ್ನು ನೋಡುವ ಹೊಸ ಮಾರ್ಗವನ್ನು ವ್ಯಾಖ್ಯಾನಿಸುವ ಬಸವಣ್ಣನವರ ವಚನಗಳು ಇಂದಿಗೂ ಅಭಿವ್ಯಕ್ತಿಯನ್ನು ಕಂಡುಕೊಂಡಿದೆ ಹಾಗೂ ಜನರಿಗೆ ಹೊಸ ಹುರುಪನ್ನು ನೀಡುತ್ತದೆ ಎಂದರು.
ಜಿಲ್ಲಾ ಅಧ್ಯಕ್ಷ ಮಹಾಂತೇಶ ನೂಲಾನವರ್ ಮಾತನಾಡಿ, ಇಂದಿನ ಈ ಕೊರೊನಾ ಮಹಾಮಾರಿಯ ದುಸ್ಥಿತಿಯಲ್ಲಿ ನಮ್ಮ ಬಸವಣ್ಣವರ ವಚನಗಳು ನಮಗೆ ತುಂಬಾ ಅವಲೋಕಿಸುತ್ತವೆ. ನಾವು ಮಾಡುವ ಪ್ರತಿಯೊಂದು ಕಾಯಕವು ನಮ್ಮನ್ನು ಪ್ರತಿಬಿಂಬಿಸುತ್ತದೆ ಹಾಗೆಯೇ ಇಂದಿನ ಕೊರೋನಾ ಅಲೆಯಲ್ಲಿ ಜನರಿಗೆ ಎಷ್ಟೇ ಎಚ್ಚರಿಕೆಯ ಕ್ರಮಗಳನ್ನು ಜಾರಿಗೊಳಿಸಿದರೂ ಅವುಗಳನ್ನು ಅನುಸರಿಸದೆ ತಮ್ಮನ್ನು ತಾವೇ ದಹಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಒಳ್ಳೆಯದೇ ಆಗಲಿ ಕೆಟ್ಟದೇ ಆಗಲಿ ಅದರ ಚಿಕ್ಕ ಪ್ರಯತ್ನ ದೊಡ್ಡ ಪರಿಣಾಮವು ಆಗಬಹುದು, ದೊಡ್ಡ ಪ್ರಯೋಜನಕಾರಿಯೂ ಆಗಬಹುದು. ಕೊರೋನಾ ಎಂಬ ಚಿಕ್ಕ ವೈರಾಣು ಇಡೀ ಮನುಷ್ಯ ದೇಹವನ್ನೇ ನುಸುಳಿ ದಹಿಸುತ್ತಿದೆ. ಇದನ್ನು ತಡೆಯಲು ನಮ್ಮ ಜನರು ಮಾಡಬೇಕಾದ ಚಿಕ್ಕ ಪ್ರಯತ್ನ ಎಂದರೆ ಮಾಸ್ಕ್ ಧರಿಸಿಕೊಳ್ಳುವುದು, ಅಂತರ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ಮಣೂರ, ಸಂಘಟನಾ ಸಂಚಾಲಕ ಬಸವರಾಜ ಗುರುಶೆಟ್ಟಿ, ಸಂಘಟನಾ ಕಾರ್ಯದರ್ಶಿ ಸಾಹೇಬಗೌಡ ದುದ್ದಗಿ, ರಾಹುಲ ಗುತ್ತೇದಾರ, ಎನ್.ಎಂ.ಶೆಳ್ಳಗಿ, ಭಾಗಣ್ಣ ತಮದೊಡ್ಡಿ, ತಾಲೂಕಾಧ್ಯಕ್ಷ ಸಂತೋಷ ಮನಗೂಳಿ, ಆರ್.ಎಲ್.ಕನ್ನೊಳ್ಳಿ, ರೇವಣಸಿದ್ದಪ್ಪ ಹಡಪದ, ದಯಾನಂದ ಜಾಡರ್, ಬಸವರಾಜ ದೇಸಾಯಿ, ಶಿವರಾಯಗೌಡ ಖೈನೂರ, ಕಲ್ಮೇಶ ಹಿಪ್ಪರಗಿ, ಶಿವಾನಂದ ಮುಡಸಿ, ಆನಂದ ಚಿಮ್ಮಲಗಿ ಸೇರಿದಂತೆ ಇನ್ನಿತರರು ಇದ್ದರು.