
ಕಲಬುರಗಿ,ಏ.21: ನಗರದ ಜಗತ್ ವೃತ್ತದಲ್ಲಿನ ಬಸವ ಸಾಂಸ್ಕøತಿಕ ವೇದಿಕೆಯಲ್ಲಿ ಏಪ್ರಿಲ್ 23ರಿಂದ 28ರವರೆಗೆ ಜಿಲ್ಲಾಡಳಿತದ ನೇತೃತ್ವದಲ್ಲಿ ಜರುಗುವ ಬಸವ ಜಯಂತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು ಎಂದು ಉತ್ಸವ ಸಮಿತಿಯ ಅಧ್ಯಕ್ಷ ರವೀಂದ್ರ ಶಾಬಾದಿ ಮತ್ತು ಪ್ರಧಾನ ಸಂಚಾಲಕ ಆರ್.ಜಿ. ಶೆಟಗಾರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 24ರಿಂದ 28ರವೆಗೆ ಪ್ರತಿ ದಿನ ಸಂಜೆ 6 ಗಂಟೆಗೆ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಏಪ್ರಿಲ್ 24ರಂದು ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿ ಉಪಾಧ್ಯಕ್ಷ ಬಸವರಾಜ್ ಧನ್ನೂರು ಅವರು ಉದ್ಘಾಟಿಸುವರು. ದಿವ್ಯ ಸಾನಿಧ್ಯವನ್ನು ಬಸವಕಲ್ಯಾಣದ ಬಸವಲಿಂಗ ಪಟ್ಟದ್ದೇವರು, ನೇತೃತ್ವನ್ನು ಚರಲಿಂಗ ಮಹಾಸ್ವಾಮೀಜಿ, ಅಧ್ಯಕ್ಷತೆಯನ್ನು ಉಮಾಕಾಂತ್ ನಿಗ್ಗುಡಗಿ ಅವರು ವಹಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಎಸ್.ಜಿ. ಸಿದ್ಧರಾಮಯ್ಯ ಅವರು ಅನುಭಾವ ನೀಡುವರು. ಮೇಯರ್ ವಿಶಾಲ್ ದರ್ಗಿ ಅವರು ಷಟಸ್ಥಲ ಧ್ವಜಾರೋಹಣ ಮಾಡುವರು ಎಂದು ಅವರು ಹೇಳಿದರು.
ಏಪ್ರಿಲ್ 25ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ಬಸವರಾಜ್ ಗಾದಗೆ ಅವರು ಉದ್ಘಾಟಿಸುವರು. ನೆಲೋಗಿಯ ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು, ರಾವೂರಿನ ಸಿದ್ದಲಿಂಗ್ ಮಹಾಸ್ವಾಮಿಗಳು ನೇತೃತ್ವವನ್ನು, ಅಧ್ಯಕ್ಷತೆಯನ್ನು ಮಲ್ಲಿಕಾರ್ಜುನ್ ವಡ್ಡನಕೇರಿ ಅವರು ವಹಿಸುವರು. ಮೈಸೂರಿನ ಜ್ಞಾನ ಪ್ರಕಾಶ್ ಸ್ವಾಮೀಜಿ ಅನುಭಾವ ನೀಡುವರು ಎಂದು ಅವರು ತಿಳಿಸಿದರು.
ಏಪ್ರಿಲ್ 26ರಂದು ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಹೇಮಾವತಿ ಅವರು ಉದ್ಘಾಟನೆ ನೆರವೇರಿಸುವರು. ಡಾ. ದಾಕ್ಷಾಯಣಿ ಎಸ್. ಅಪ್ಪಾ ಅವರು ದಿವ್ಯ ಸಾನಿಧ್ಯವನ್ನು, ಪ್ರಭುಶ್ರೀ ತಾಯಿ ಅವರು ನೇತೃತ್ವವನ್ನು, ಡಾ. ವಿಲಾಸವತಿ ಖೂಬಾ ಅವರು ಅಧ್ಯಕ್ಷತೆಯನ್ನು ವಹಿಸುವರು. ಭದ್ರಾವತಿಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಎಮಿರೆಟಸ್ ಪ್ರೊ. ವಿಜಯಾದೇವಿ ಅವರು ಅನುಭಾವ ನೀಡುವರು ಎಂದು ಅವರು ಹೇಳಿದರು.
ಏಪ್ರಿಲ್ 27ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಎ.ಎಸ್. ಸದಲಗೆ ಅವರು ಉದ್ಘಾಟನೆ ನೆರವೇರಿಸುವರು. ಧುತ್ತರಗಾಂವ್- ಉಸ್ತುರಿಯ ವಿಶ್ವನಾಥ್ ಕೋರಣೇಶ್ವರ್ ಮಹಾಸ್ವಾಮೀಜಿ ದಿವ್ಯ ಸಾನಿಧ್ಯವನ್ನು, ಚಿಗರಳ್ಳಿಯ ಸಿದ್ದಬಸವ ಕಬೀರ್ ಸ್ವಾಮಿಗಳು ನೇತೃತ್ವವನ್ನು, ಬೀದರ್ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಎಸ್. ಬಿರಾದಾರ್ ಅವರು ಅಧ್ಯಕ್ಷತೆಯನ್ನು ವಹಿಸುವರು. ಶರಣ ಸಾಹಿತಿ ಪ್ರೊ. ಜಿ.ಎಸ್. ಪಾಟೀಲ್ ಅವರು ಅನುಭಾವ ನೀಡುವರು ಎಂದು ಅವರು ತಿಳಿಸಿದರು.
ಏಪ್ರಿಲ್ 28ರಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೈಜನಾಥ್ ತಡಕಲ್ ಅವರು ಉದ್ಘಾಟನೆ ನೆರವೇರಿಸುವರು. ಚಿತ್ತರಗಿ- ಇಲಕಲ್‍ನ ಗುರುಮಹಾಂತ ಸ್ವಾಮೀಜಿ ದಿವ್ಯ ಸಾನಿಧ್ಯವನ್ನು, ಲಿಂಗಸೂಗೂರಿನ ಸಿದ್ದಲಿಂಗ ಮಹಾಸ್ವಾಮಿಗಳು ನೇತೃತ್ವವನ್ನು, ಆರ್.ಜಿ. ಶೆಟಗಾರ್ ಅವರು ಅಧ್ಯಕ್ಷತೆಯನ್ನು ವಹಿಸುವರು. ಬೆಂಗಳೂರಿನ ನಿವೃತ್ತ ಪ್ರಿನ್ಸಿಪಾಲ್ ವಿ. ಚಂದ್ರಶೇಖರ್ ನಂಗಲಿ ಅವರು ಅನುಭಾವ ನೀಡುವರು ಎಂದು ಅವರು ಹೇಳಿದರು.
ಏಪ್ರಿಲ್ 29ರಂದು ಸಂಜೆ 6 ಗಂಟೆಗೆ ನಗರೇಶ್ವರ್ ಶಾಲೆ ಆವರಣದಿಂದ ವಿಶ್ವ ಗುರು ಬಸವಣ್ಣನವರ ವರ್ಣರಂಜಿತ ಭಾವಚಿತ್ರ ಹಾಗೂ ಸರ್ವ ಶರಣರ ಭಾವಚಿತ್ರಗಳೊಂದಿಗೆ ವಚನ ನೃತ್ಯ, ವಚನ ಗಾಯನ, ಕೋಲಾಟ, ಜಾನಪದ ಕಲಾವಿದರನ್ನು ಒಳಗೊಂಡ ಭವ್ಯ ಮೆರವಣಿಗೆ ಕಿರಾಣಾ ಬಜಾರ್, ಸೂಪರ್ ಮಾರ್ಕೆಟ್ ಮೂಲಕ ಜಗತ್ ವೃತ್ತದ ಬಸವೇಶ್ವರರ ಮೂರ್ತಿ ಆವರಣದಲ್ಲಿ ಮಂಗಲಗೊಳ್ಳಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮಗಳಲ್ಲಿ ಹಲವರಿಗೆ ಸನ್ಮಾನ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಉಮಾಕಾಂತ್ ನಿಗ್ಗುಡಗಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬಿದರಿ, ಅಶೋಕ್ ಘೂಳಿ ಮುಂತಾದವರು ಉಪಸ್ಥಿತರಿದ್ದರು.