ಬಸವ ಜಯಂತಿ ಆಚರಣೆ


ಲಕ್ಷ್ಮೇಶ್ವರ,ಏ.24: ಪಟ್ಟಣದಲ್ಲಿ ಭಾನುವಾರ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಇಲ್ಲಿನ ಮಹಾಕವಿ ಪಂಪ ವರ್ತುಲದಲ್ಲಿ ನೇತಾಜಿ ಯುವಕ ಮಂಡಳ, ಆಟೋ ಚಾಲಕರು ಮತ್ತು ಮಾಲಕರ ಸಂಘದ ವತಿಯಿಂದ ಬಸವಣ್ಣನವರ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕ ರಾಜಣ್ಣ ಮುಳ್ಳಳ್ಳಿ ಮಾತನಾಡಿ ‘ಸಮಾಜದಲ್ಲಿನ ಜಾತಿ ಪದ್ಧತಿಯನ್ನು ತೊಡೆದು ಹಾಕಲು ಬಸವಣ್ಣನವರು ಸಾವಿರ ವರ್ಷಗಳ ಹಿಂದೆಯೇ ಹೋರಾಟ ಮಾಡಿದ್ದರು. ಈಗಿನ ಸಂವಿಧಾನವನ್ನು ಅಂದಿನ ಕಲ್ಯಾಣದಲ್ಲಿ ಸ್ಥಾಪಿಸಿದ ಅನುಭವ ಮಂಟಪದಲ್ಲಿ ಕಾಣಬಹುದಿತ್ತು’ ಎಂದರು.
ಮಹಾಂತೇಶ ತೋಟದ, ಶಿವು ಕೋರದಾಳ, ಮಂಜುನಾಥ ಕೋರದಾಳ, ಮಹೇಶ ಕಲಘಟಗಿ ಸೇರಿದಂತೆ ಮತ್ತಿತರರು ಇದ್ದರು.
ಪಟ್ಟಣದ ತಹಶೀಲ್ದಾರರ ಕಚೇರಿಯಲ್ಲಿ ಬಸವ ಜಯಂತಿಯನ್ನು ತಾಲ್ಲೂಕಾಡಳಿತದ ವತಿಯಿಂದ ಆಚರಿಸಲಾಯಿತು. ತಹಶೀಲ್ದಾರ ಕೆ.ಆನಂದಶೀಲ ಅವರು ಬಸವಣ್ಣನವರ ಸಾಧನೆಗಳ ಕುರಿತು ಮಾತನಾಡಿದರು. ಕಂದಾಯ ನಿರೀಕ್ಷಕ ಬಿ.ಕಾತ್ರಾಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಸಮೀಪದ ಶಿಗ್ಲಿಯಲ್ಲಿ ಕಾಯಕ ಜೀವಿ ಬಸವಣ್ಣನವರ ಜಯಂತಿಯನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಲಾಯಿತು. ಜೋಡೆತ್ತುಗಳನ್ನು ಸಿಂಗರಿಸಿ ಅವುಗಳಿಗೆ ಪೂಜೆ ಸಲ್ಲಿಸಲಾಯಿತು. ಇನ್ನು ಗ್ರಾಮದ ಬಸವಣ್ಣ ದೇವರಿಗೆ ವಿಶೇಷ ಪೂಜೆ ಮಾಡಲಾಗಿತ್ತು. ಗ್ರಾಮಸ್ಥರು ಸಿಹಿ ಅಡುಗೆ ಮಾಡಿಕೊಂಡು ದೇವಸ್ಥಾನಕ್ಕೆ ಆಗಮಿಸಿ ದೇವರಿಗೆ ಎಡೆ ಸಮರ್ಪಿಸಿದರು.