ಬಸವ ಜಯಂತಿ ಆಚರಣೆಎತ್ತಿನಗಾಡಿಯಲ್ಲಿ ಅದ್ದೂರಿ ಮೆರವಣಿಗೆ.


ಸಂಜೆವಾಣಿ ವಾರ್ತೆ
 ಕೂಡ್ಲಿಗಿ. ಮೇ.22 :- ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ತಾಲೂಕಿನ ಕಾನಾಹೊಸಹಳ್ಳಿಯಲ್ಲಿ ಮಂಗಳವಾರದಂದು ಶ್ರೀ ಬಸವೇಶ್ವರರ ಭಾವಚಿತ್ರ ಇಟ್ಟು ಎತ್ತಿನಬಂಡಿಯಲ್ಲಿ ಅದ್ದೂರಿ ಮೆರವಣಿಗೆ ಮಾಡಿ ವಿಜೃಂಭಣೆಯಿಂದ ಆಚರಿಸಲಾಯಿತು.
ಬಸವೇಶ್ವರರ  ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದ  ಕುಂಬಾರ ತಿಪ್ಪೇರುದ್ರಪ್ಪ  ಮಾತನಾಡಿ, ಕಾಯಕ, ದಾಸೋಹ ತತ್ವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಸತ್ಯಶುದ್ಧ ಮನಸ್ಸು ಉಳ್ಳವರಾಗಬೇಕು. ಬಸವಾದಿ ಶರಣರು ನುಡಿದಂತೆ ನಡೆದಿದ್ದಾರೆ. ಅವರು ರಚಿಸಿರುವ ವಚನಗಳ ಸಾರವನ್ನು ಅರ್ಥೈಸಿಕೊಂಡು ಜೀವನ    ನಡೆಸುವುದರಿಂದ ನೆಮ್ಮದಿ ಸಿಗುವುದರಲ್ಲಿ ಸಂದೇಹವಿಲ್ಲ ಎಂದು ತಿಳಿಸಿದರು.
ಕಾನಹೊಸಹಳ್ಳಿಯ  ಕುಂಬಾರ ತಿಪ್ಪೇರುದ್ರಪ್ಪ ಅವರ ಮನೆಯಿಂದ ಪ್ರಮುಖ ಬೀದಿಯಲ್ಲಿ ಸಮಾಳ ಸೇರಿ ನಾನಾ ವ್ಯಾದ್ಯಗಳೊಂದಿಗೆ ಎತ್ತಿನ ಗಾಡಿಯಲ್ಲಿ ಬಸವಣ್ಣನವರ ಭಾವಚಿತ್ರವನ್ನು ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು. ಅಲ್ಲದೆ, ರಸ್ತೆಯುದ್ದಕ್ಕೂ ಸಾರ್ವಜನಿಕರಿಗೆ ಪಾನಕ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶರಣನಗೌಡ, ವೀರಣ್ಣ, ಪರಮೇಶ್‌ಗೌಡ, ಕುಮತಿ ಬಸವರಾಜ, ಅಂಗಡೇರ ಶಿವಣ್ಣ, ರಾಮೇಗಳ ಮಂಜುನಾಥ, ಮಾಡಗೌಡ್ರ ಕಲ್ಲೇಶ್, ದೊಣೆಹಳ್ಳೇರ ಮಂಜು, ಶಿಕ್ಷಕ ರೇಣುಕಾರಾಧ್ಯ, ಹಡಪದ ರವಿ, ನಿಂಗಣ್ಣ ಸೇರಿ ಇತರರಿದ್ದರು. ಮಹಿಳೆಯರು, ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.