
ವಿಜಯಪುರ:ಆ.14:ಜಗಜ್ಯೋತಿ ಬಸವೇಶ್ವರರ ಹುಟ್ಟು ಹಾಗೂ ಹುಟ್ಟೂರಿನ ಬಗ್ಗೆ ವಿಭಿನ್ನ ಮತ್ತು ವಿಶಿಷ್ಟ ರೀತಿಯ ಪುಸ್ತಕ ಬರೆದ ಸಾಹಿತಿ ಡಾ. ಮುರುಗೇಶ ಸಂಗಮ ಅವರ ‘ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ’ ಗ್ರಂಥ ಮೌಲಿಕವಾಗಿದೆ ಎಂದು ಹಿರಿಯ ಸಾಹಿತಿ, ಸಂಶೋಧಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಹೇಳಿದರು.
ನಗರದ ಚೇತನಾ ಕಾಲೇಜಿನ ಸಭಾಂಗಣದಲ್ಲಿ ಬಸವ ಜನ್ಮಭೂಮಿ ಪ್ರತಿಷ್ಠಾನ ಆಯೋಜಿಸಿದ್ದ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿ, ಸರಳ, ಸುಂದರವಾದ ಶೈಲಿಯಲ್ಲಿ ಪದಲಾಲಿತ್ಯವನ್ನು ಇಟ್ಟು ರಚಿಸಿದ ಅಪರೂಪದ ಈ ಪುಸ್ತಕ ಬಸವಣ್ಣನವರ ಜನ್ಮ ಹಾಗೂ ಜೀವನ ಚರಿತ್ರೆ ಮೇಲೆ ಅಧಿಕೃತತೆಯ ಮುದ್ರೆಯೊತ್ತಿದೆ.
ಬಸವೇಶ್ವರರ ಕುರಿತು ಕನ್ನಡ ಸಾಹಿತ್ಯದಲ್ಲಿ ಹೇರಳವಾಗಿ ಕೃತಿಗಳು ದೊರಕುತ್ತವೆ. ಆದರೆ ಬಸವ ಜನ್ಮಸ್ಥಳದ ಇತಿಹಾಸವನ್ನು ಆಧಾರಸಹಿತವಾಗಿ ಬರೆಯಲಾದ ಈ ಗ್ರಂಥ ಉತ್ಕøಷ್ಟವಾಗಿದ್ದು ಅಮೂಲ್ಯವಾಗಿದೆ. ವಚನ ಚಳುವಳಿಯ ಕೇಂದ್ರಸ್ಥಾನವಾದ ಬಸವನಬಾಗೇವಾಡಿ ಸ್ಥಳ ಪುರಾಣವನ್ನು ನಿಖರವಾಗಿ ನಿರೂಪಿಸಿದ ಈ ಹೊತ್ತಿಗೆ ಉತ್ತಮ ಕೃತಿಯಾಗಿದೆ ಎಂದರು.
ಅತಿಥಿ ಸಾಹಿತಿ ಪ್ರೊ. ಮಹಾದೇವ ರೆಬಿನಾಳ ಮಾತನಾಡಿ ಬಾಗೇವಾಡಿಯಲ್ಲಿ ಜನ್ಮ ಪಡೆದ ಬಸವಣ್ಣನವರ ವಚನಗಳ ಸಾರವನ್ನು ಜೀವನದ ಉಸಿರಾಗಿಸಿಕೊಂಡರೆ ಬದುಕು ಹಸನಾಗುವುದು. ಬಸವ ಜನ್ಮಸ್ಥಳದ ಐತಿಹ್ಯದ ಕುರಿತು ಬರೆದ ಈ ಗ್ರಂಥ ಓದಿದರೆ ಜೀವನ ಪಾವನವಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸಿದ್ಧಲಿಂಗ ಮನಹಳ್ಳಿ ಮಾತನಾಡಿ ಡಾ. ಮುರುಗೇಶ ಸಂಗಮ ಅವರು ಬಸವಣ್ಣ ಹುಟ್ಟಿದ ಬಾಗೇವಾಡಿಯಲ್ಲಿ ಜನಿಸಿದವರು. ಹಾಗಾಗಿ ಈ ಕೃತಿಯಲ್ಲಿ ಒಂದು ಅಗ್ರಹಾರದ ಪೂರ್ಣ ಪರಿಚಯವಿದೆ. ಇತಿಹಾಸದ ಆಳಕ್ಕಿಳಿದು ಬಸವೇಶ್ವರರು ಜನ್ಮತಾಳಿದ ಮನೆ ಮತ್ತು ಬಸವೇಶ್ವರ ದೇವಸ್ಥಾನದ ಐತಿಹಾಸಿಕತೆ ಹಾಗೂ ಕ್ಷೇತ್ರ ಚರಿತ್ರೆಯನ್ನು ವಸ್ತುನಿಷ್ಟವಾಗಿ ಉಲ್ಲೇಖಿಸಿರುವುದು ಗಮನಾರ್ಹ ಸಂಗತಿಯಾಗಿದೆ ಎಂದರು.
ಬಸವನಬಾಗೇವಾಡಿ ವಿರಕ್ತಮಠದ ಸಿದ್ಧಲಿಂಗಶ್ರೀ ಸಾನಿಧ್ಯ ವಹಿಸಿದ್ದರು. ಸಾಹಿತಿ ಜಂಬುನಾಥ ಕಂಚ್ಯಾಣಿ ಗ್ರಂಥ ಪರಿಚಯಿಸಿದರು. ಕೃತಿಕರ್ತೃ ಡಾ. ಮುರುಗೇಶ ಸಂಗಮ ಪ್ರಾಸ್ತಾವಿಕ ಮಾತನಾಡಿದರು. ಚೇತನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜೇಶ್ವರಿ ಜುಗತಿ ಅತಿಥಿಯಾಗಿದ್ದರು. ಬಬಲೇಶ್ವರದ ಡಾ. ಶಂಕರಗೌಡ ಬಿರಾದಾರ ಅವರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಈರಣ್ಣ ಶಿರಮಗೊಂಡ, ಬಸವರಾಜ ಅಗಸರ, ಶಿವಾಜಿ ಮೋರೆ, ಶಿವಲಿಂಗ ಕಾರಜೋಳ, ಗೋಪಾಲ ಹೂಗಾರ, ಶಿವಾನಂದ ಮಂಗಾನವರ, ಮಹಾವೀರ ಮುತ್ತಿನ, ತಾರಾಮತಿ ಪಾಟೀಲ, ಈರಮ್ಮ ಬೋನೂರ, ನಾಗಮ್ಮ ಉಮರ್ಜಿ, ಎಂ.ಆರ್. ತೋಟದ, ಕಲ್ಯಾಣರಾವ ದೇಶಪಾಂಡೆ, ವಿಜಯಲಕ್ಷ್ಮಿ ಧನಶೆಟ್ಟಿ, ಎಂ.ಕೆ. ಕಾರಜೋಳ, ಶೇಖಯ್ಯ ಕೂಡಗಿ, ಜ್ಯೋತಿ ಸಂಗಮ, ಶಿವಾಜಿ ಮರಾಠೆ, ಹಣಮಂತ ವಡ್ಡೊಡಗಿ ಮತ್ತಿತರರು ಉಪಸ್ಥಿತರಿದ್ದರು.
ಸಾಹಿತಿ ಎ.ಎಚ್. ಕೊಳಮಲಿ ಸ್ವಾಗತಿಸಿದರು. ಪ್ರೊ. ಮಲ್ಲಿಕಾರ್ಜುನ ಅವಟಿ ನಿರೂಪಿಸಿದರು. ಸಾಹಿತಿ ಬಸವರಾಜ ಅಗಸರ ವಂದಿಸಿದರು.