ಬಸವ ಕೇಂದ್ರ, ರಾಯಚೂರು

ರಾಯಚೂರು,ಜ.೧೦- ನಗರದ ಬಸವ ಕೇಂದ್ರದಲ್ಲಿ ಪರಮಪೂಜ್ಯ ಜ್ಞಾನ ಯೋಗಿ, ಶ್ರೀ ಸಿದ್ದೇಶ್ವರ ಸ್ವಾಮಿಗಳ ಕುರಿತು ನುಡಿನಮನ ಹಾಗೂ ಶರಣ ಮೇದಾರ ಕೇತಯ್ಯನವರ ಸ್ಮರಣೋತ್ಸವ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ, ಶರಣ ಪಥದಲ್ಲಿ ಅದ್ವಿತೀಯ ಸಾಧನೆಗೈದ ಶ್ರೇಷ್ಠ ಪ್ರವಚನಕಾರ, ಬಸವಜ್ಞಾನ ಗುರುಕುಲ ಆಶ್ರಮದ ಅಧ್ಯಕ್ಷರಾಗಿದ್ದ ಲಿಂಗೈಕ್ಯ, ಶರಣ ಡಾ. ಈಶ್ವರ ಮಂಟೂರರವರ ಪೂಜ್ಯ ತಂದೆಯವರಾದ ಶರಣ ಶ್ರೀಶೈಲಪ್ಪ ಮಂಟೂರ ಹಾಗೂ ಶರಣರ ಧರ್ಮಪತ್ನಿ , ಶರಣೆ ಹೇಮಾ ಈಶ್ವರ ಮಂಟೂರ ಆಗಮಿಸಿದ್ದರು.
ಈ ಸಂದರ್ಭದಲ್ಲಿ ವಿಶೇಷ ಚಿಂತನೆಗೈದ ಶರಣೆ ಅನ್ನಪೂರ್ಣ ಮೇಟಿರವರು ಪರಮಪೂಜ್ಯ ಸಿದ್ದೇಶ್ವರ ಸ್ವಾಮಿಗಳ ಸಾರ್ಥಕ ಜೀವನದ ಒಂದು ಕಿರು ಪರಿಚಯ ನೀಡುತ್ತಾ, ಮನುಷ್ಯರು ಬದುಕಿದರೆ ಅವರಂತೆ ಅತ್ಯಂತ ಸರಳವಾಗಿ ಬದುಕಬೇಕು ಎಂದು ಹೇಳಿದರು. ಪೂಜ್ಯರು ಆಧ್ಯಾತ್ಮಿಕ ಜ್ಞಾನ ದಾಸೋಹ ನೀಡುವುದರ ಮೂಲಕ ಮನುಕುಲದ ಸಕಲ ಜೀವಾತ್ಮಗಳ ಅಂತರಂಗದ ಕಗ್ಗತ್ತಲನ್ನು ಕಳಚುವ ದಿವ್ಯ ಚೈತನ್ಯಾತ್ಮಕ ಬೆಳಕು ಪಸರಿಸಿದ್ದಾರೆ ಎಂದು ಶ್ಲಾಘಿಸಿದರು.
ಹಿರಿಯ ಶರಣೆ, ಸುಮಂಗಲಮ್ಮ ಹಿರೇಮಠರವರು ಚಿಂತನೆ ಮಾಡುತ್ತಾ, ೧೨ನೇ ಶತಮಾನದ, ವಿಶ್ವಗುರು ಬಸವಣ್ಣನವರ ಸಮಕಾಲೀನ ಅತ್ಯಂತ ಕಾಯಕ ನಿಷ್ಠೆ ಶರಣನಾದ ಮೇದಾರ ಕೇತಯ್ಯನವರು, ದಲಿತವರ್ಗದ ಶರಣರ ಪ್ರತಿನಿಧಿಯಾಗಿ, ಸತ್ಯ ಶುದ್ಧ ಕಾಯಕ ಜೀವಿಯಾಗಿ, ಜಂಗಮಪ್ರಾಣಿಯಾಗಿ, ನಿತ್ಯ ದಾಸೋಹಿಯಾಗಿ, ಕಾಯಕದಿಂದ ಬಂದುದನ್ನು, ದಾಸೋಹಕ್ಕೆ ವಿನಿಯೋಗಿಸಿ ಪ್ರಸಾದವನ್ನು ಸ್ವೀಕರಿಸಿ, ಪ್ರಸಾದವನ್ನು ಕಾಯಕವನ್ನಾಗಿಸಿಕೊಂಡು ಸದ್ಭಕ್ತನಾಗಿ ನಿಷ್ಠೆಯಿಂದ ಕೂಡಿದ ಆಚಾರಮಾರ್ಗದಲ್ಲಿ ನಡೆದ ಶ್ರೇಷ್ಠ ಶರಣ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಬಸವ ಕೇಂದ್ರದ ಕಾರ್ಯದರ್ಶಿಗಳಾದ, ಶರಣ ಚೆನ್ನಬಸವಣ್ಣ ಮಹಾಜನಶೆಟ್ಟಿರವರು ಮಾತನಾಡುತ್ತಾ, ಬಸವಾದಿ ಶರಣರ ವಚನ ಸಾಹಿತ್ಯ ಹಾಗೂ ಆಧ್ಯಾತ್ಮಿಕದ ಪ್ರವಚನದ ಮೂಲಕ ಬಸವ ತತ್ವವನ್ನು ನಾಡು, ದೇಶ ಮತ್ತು ವಿದೇಶಗಳೆಲ್ಲೆಡೆ ಪ್ರಚಾರಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಶ್ರೇಷ್ಠ ಹಾಗೂ ಅನುಭವಿ ಪ್ರವಚನಕಾರರಾಗಿದ್ದ, ಪರಮಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಹಾಗೂ ಡಾ. ಈಶ್ವರ್ ಮಂಟೂರವರ ಸಾಧನೆ ಅಪಾರ ಹಾಗೂ ಅಮೂಲ್ಯ ಎಂದು ವರ್ಣಿಸುತ್ತಾ ಅವರೊಂದಿಗಿನ ತಮ್ಮ ನಿಕಟ ಒಡನಾಟವನ್ನು ಸ್ಮರಿಸಿದರು.
ಶರಣ, ಜೆ ಬಸವರಾಜು, ನ್ಯಾಯವಾದಿಗಳು ಮಾತನಾಡುತ್ತಾ, ಡಾ. ಈಶ್ವರ್ ಮಂಟೂರ್ ಅವರ ದಿವ್ಯ ಸಾನಿಧ್ಯದಲ್ಲಿ ಬಸವ ಕೇಂದ್ರದ ಅನುಭವ ಮಂಟಪದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ನವೆಂಬರ್ ೨೦೧೯ ರಲ್ಲಿ ನಡೆದಿತ್ತು ಎಂದು ಸ್ಮರಿಸಿದರು. ಈ ಸಂದರ್ಭದಲ್ಲಿ ಮಂಟೂರ್ ಶರಣರು ಏಳು ದಿನಗಳ ಕಾಲ ಬಸವ ಕೇಂದ್ರದಲ್ಲಿ, ರಾಯಚೂರು ನಗರದ ಜನತೆಗೆ ಶರಣರ ಚಿಂತನೆ ಕುರಿತು ಅತ್ಯಂತ ಸರಳವಾಗಿ ಎಲ್ಲರ ಮನಮುಟ್ಟುವಂತೆ ಪ್ರವಚನ ಪ್ರಸಾದ ಉಣಬಡಿಸಿದರು ಎಂದು ತಿಳಿಸುತ್ತಾ, ಈ ಇಬ್ಬರು ಮಹಾನ್ ಶರಣರು ಲಿಂಗೈಕ್ಯರಾಗಿದ್ದು ಈ ನಾಡಿನ ಶರಣ ಸಂಕುಲಕ್ಕೆ ಹಾಗೂ ಬಸವತತ್ವ ಅನುಯಾಯಿಗಳಿಗೆ ತುಂಬಲಾರದ ನಷ್ಟ ಎಂದು ಕಂಬನಿ ಮಿಡಿದರು.
ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಿಗೆ ಬಸವ ಕೇಂದ್ರದ ವತಿಯಿಂದ ಗೌರವ ಸನ್ಮಾನ ನೀಡಲಾಯಿತು.
ವಚನ ಗಾಯನ ಮತ್ತು ಸಾಮೂಹಿಕ ಬಸವ ಪ್ರಾರ್ಥನೆಯನ್ನು ರಾಘವೇಂದ್ರ ಆಶಾಪುರ ಹಾಗೂ ಶರಣೆ ಪಾರ್ವತಿ ಪಾಟೀಲ್ ಮತ್ತು ಅಶ್ವಿನಿ ಮಂಟೂರು ನಡೆಸಿಕೊಟ್ಟರು.
ಮಲ್ಲಿಕಾರ್ಜುನ್ ಗುಡಿಮನಿ ಸ್ವಾಗತ ಕೋರಿದರು, ರಮೇಶ್ ಶಾಲೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿವಕುಮಾರ್ ಮಾಟೂರು ನಿರೂಪಿಸಿದರು. ಕರಿಬಸಪ್ಪ ಮೇಟಿ ವಂದಿಸಿದರು.