ಬಸವ ಎಕ್ಸ್‍ಪ್ರೆಸ್ ರೈಲಿನ ಮೇಲೆ ಕಲ್ಲು: ಬೆಚ್ಚಿ ಬಿದ್ದ ಪ್ರಯಾಣಿಕರು

ಕಲಬುರಗಿ,ಜು.20: ಈ ಹಿಂದೆ ಕಲಬುರ್ಗಿ- ಬೀದರ್ ಪ್ಯಾಸೆಂಜರ್ ರೈಲಿಗೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ ಘಟನೆ ಇನ್ನು ಮಾಸುತ್ತಿರುವ ಸಂದರ್ಭದಲ್ಲಿಯೇ ಕಿಡಿಗೇಡಿಗಳು ಬಸವ ಎಕ್ಸ್‍ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ಮಾಡಿದ ಘಟನೆ ಸಂಭವಿಸಿದೆ.
ತಾಲ್ಲೂಕಿನ ಬಬಲಾದ್ ಗ್ರಾಮದ ಬಳಿ ಕಳೆದ ಬುಧವಾರ ರಾತ್ರಿ ಬಸವ ಎಕ್ಸ್‍ಪ್ರೆಸ್ (ಬಾಗಲಕೋಟೆ- ಬೆಂಗಳೂರು) ರೈಲಿನ ಎಸಿ ಎ1 ಬೋಗಿಗೆ ಕಲ್ಲು ತೂರಾಟ ಮಾಡಿದ್ದು, ಬೋಗಿಯ ಗಾಜು ಪುಡಿಪುಡಿಯಾಗಿದೆ. ಘಟನೆಯಲ್ಲಿ ಒಂದಿಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕಲ್ಲು ತೂರಾಟದಿಂದಾಗಿ ಬಾಗಲಕೋಟೆ- ಮೈಸೂರು ಮಾರ್ಗದಲ್ಲಿ ಸಂಚರಿಸುವ ಕಲಬುರ್ಗಿ, ವಾಡಿ, ಯಾದಗಿರಿ ಸೇರಿದಂತೆ ವಿವಿಧ ಸ್ಥಳಗಳ ಪ್ರಯಾಣಿಕರು ಬೆಚ್ಚಿ ಬಿದ್ದರು. ಒಂದು ಹಂತದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.
ಸ್ಥಳೀಯ ಪ್ರಯಾಣಿಕನು ಈ ಕುರಿತು ಮಾಹಿತಿ ನೀಡಿ, ಒಬ್ಬ ವ್ಯಕ್ತಿ ಹವಾನಿಯಂತ್ರಿತ ಎ ಒನ್ ಬೋಗಿಯ ದ್ವಾರಕ್ಕೆ ಒಂದು ಕಲ್ಲು ಹೊಡೆದ. ಮತ್ತೆರಡು ಕಲ್ಲುಗಳನ್ನು ಬೋಗಿಯ ಕಿಟಕಿಯತ್ತ ತೂರಿದ. ಇದರಿಂದ ಕಿಟಕಿಯ ಗಾಜುಗಳು ಒಡೆದುಹೋಗಿವೆ. ಅದೇ ರೀತಿ ಚಾಲಕನಿರುವ ಎಂಜಿನ್ ಮೇಲೂ ಕಲ್ಲು ತೂರಾಟ ಮಾಡಿದ್ದು, ಯಾರಿಗೂ ಸಹ ಯಾವುದೇ ರೀತಿಯಲ್ಲಿ ಅಪಾಯವಾಗಿಲ್ಲ ಎಂದು ಹೇಳಿದ.
ವಾಡಿ ರೈಲು ನಿಲ್ದಾಣದಲ್ಲಿ ನಿಲ್ದಾಣದ ವ್ಯವಸ್ಥಾಪಕರು ಕಲ್ಲೇಟಿನಿಂದ ಹಾನಿಗೀಡಾದ ಬೋಗಿಯ ಗಾಜನ್ನು ಪರಿಶೀಲಿಸಿದರು. ಸಣ್ಣಪುಟ್ಟ ಗಾಯಗಳಾದ ಪ್ರಯಾಣಿಕರಿಗೆ ಪ್ರಥಮ ಚಿಕಿತ್ಸೆ ನೀಡಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪಕರು ಮಾತನಾಡಿ, ಬಬಲಾದ್- ಕಲಬುರ್ಗಿ ಮಧ್ಯದಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಕಲ್ಲು ತೂರಿದದಾರೆ. ಅದರ ಪರಿಣಾಮ ಎಸಿಎ-1 ಎರಡು ಗಾಜುಗಳು ಹಾಗೂ ಎಂಜಿನ್ ಚಾಲಕನ ಮುಂದಿನ ಗ್ಲಾಸು ಒಡೆದಿದೆ. ಪ್ರಯಣಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದರು. ಈ ಕುರಿತು ವಾಡಿ ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.