ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭ

ಕಲಬುರಗಿ:ಜೂ.12:ನೀರಿನ ಸರ್ಮಪಕ ಬಳಕೆ ಹಾಗು ರಕ್ಷಣೆಗೆ ಪ್ರತಿಯೊಬ್ಬರು ಪಣತೊಡಬೇಕು ಎಂದು ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಉಪಪ್ರಾಂಶುಪಾಲರಾದ ಶಿವಸಾಯಿ ಮಮದಾಪೂರ ಹೇಳಿದರು. ಅವರು ಜೇವರ್ಗಿ ನಗರದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನೀರಿಲ್ಲದೆ ಯಾವ ಜೀವರಾಶಿಯು ಬದುಕಲಾರದು. ಮಾನವನ ಮೂಲ ಅವಶ್ಯಕತೆಗಳಲ್ಲಿ ನೀರು ಮುಖ್ಯ ಜನರು ತಮ್ಮ ಮುಂದಿನ ಪಿಳಿಗೆಗಾಗಿ ಆಸ್ತಿ, ಐಶ್ವರ್ಯ ಮಾಡಲು ಹೊರಟಿದ್ದಾರೆ. ಅದರ ಬದಲಾಗಿ ನೀರು ಸಂರಕ್ಷಿಸಿ, ಅದನ್ನು ಪೋಲಾಗದಂತೆ ನೋಡಿಕೊಂಡು ಹೋಗುವಲ್ಲಿ ಆಸಕ್ತಿವಹಿಸಬೇಕು ಎಂದು ಹೇಳಿದರು. ಪ್ರೊಫೆಸರ್ ದೇವಿಂದ್ರಪ್ಪ ವಿಶ್ವಕರ್ಮ ಮಾತನಾಡಿ ಭವಿಷ್ಯದಲ್ಲಿ ಶುದ್ಧ ನೀರು ಉಳಿಯಬೇಕಾದರೆ, ಜೀವ ಜಲ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ನೈಸರ್ಗಿಕವಾಗಿ ದೊರೆಯುವ ನೀರನ್ನು ಈಗಾಗಲೆ ಹಣ ವ್ಯಯಿಸಿ ಪಡೆಯುವಂತ ದುಸ್ಥಿತಿ ಬಂದಿದೆ. ಮನುಷ್ಯ ತನ್ನ ಸ್ವಾರ್ಥ ಜೀವನಕ್ಕಾಗಿ ಸುತ್ತ ಮುತ್ತಲಿನ ಪರಿಸರವನ್ನೇ ನಾಶಗೊಳಿಸಲು ಮುಂದಾಗಿದ್ದಾನೆ. ಮಳೆ ಅಭಾವಕ್ಕೆ ಪರಿಸರ ನಾಶವೆ ಕಾರಣವಾಗಿದೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಉಪನ್ಯಾಸಕಿಯರಾದ ಕಾವೇರಿ ಘಾಟೆ, ಕವಿತಾದೇವಿ ಹಿರೇಮಠ, ಗ್ರಂಥಪಾಲಕರಾದ ಸಿದ್ದಣ್ಣ ಹತಗುಂದಿ, ಪ್ರಶಿಕ್ಷಣಾರ್ಥಿಗಳಾದ ಅಂಜನಾ, ರೇಶ್ಮಾ, ಸಾವಿತ್ರಿ, ಚೈತ್ರಾ, ಆನಂದ್, ಸಿದ್ದೇಶ್ವರ ಸೇರಿ ಮುಂತಾದವರು ಹಾಜರಿದ್ದರು.