ಬಸವೇಶ್ವರ ಪ್ರತಿಮೆ ಪ್ರತಿಷ್ಠಾಪನೆ

ಬೆಂಗಳೂರು,ಸೆ.೬-ರಾಜಾಜಿನಗರದ ಮೋದಿ ಆಸ್ಪತ್ರೆ ಬಳಿಯ ನವರಂಗ್ ಮೇಲ್ಸೇತುವೆಯ ಮೇಲೆ ಶ್ರೀ ಜಗಜ್ಯೋತಿ ಬಸವೇಶ್ವರ ಪ್ರತಿಮೆ ಅಳವಡಿಸಲಾಯಿತು, ಪಶ್ಚಿಮ ಕಾರ್ಡ್ ರಸ್ತೆಯ ನವರಂಗ್ ಮೇಲ್ಸೆತುವೆ ಮೇಲೆ ಸುಮಾರು ಎರಡು ಟನ್ ತೂಕವಿರುವ ಶ್ರೀ ಜಗಜ್ಯೋತಿ ಬಸವೇಶ್ವರ ಸುಮಾರು ೧೩ ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ೨೦೧೮-೧೯ನೇ ಸಾಲಿನಲ್ಲಿ ಅಂದಿನ ಬಿಬಿಎಂಪಿಯ ಮೇಯರ್ ಗಂಗಾಬಿಕೆ ತಮ್ಮ ಮೇಯರ್ ವಿವೇಚನಾ ಅನುದಾನದಲ್ಲಿ ಸುಮಾರು ೧ ಕೋಟಿ ರೂ ವೆಚ್ಚದಲ್ಲಿ ಬಸವೇಶ್ವರರ ಪ್ರತಿಮೆ ಸ್ಥಾಪಿಸುವುದಕ್ಕೆ ಸೂಚಿಸಿದ್ದರು. ಮೇಲ್ಸೇತುವೆ ಮೇಲ್ಬಾಗದಲ್ಲಿ ಸುಮಾರು ೧೩ ಅಡಿ ಪ್ರತಿಮೆ ಸ್ಥಾಪನೆ ಮಾಡಲು ಪ್ರತ್ಯೇಕವಾದ ಪಿಲ್ಲರ್ ನಿರ್ಮಾಣ ಮಾಡಬೇಕಾದ ಕಾಮಗಾರಿಯಿಂದ ಪ್ರತಿಷ್ಠಾಪನೆ ನಾಲ್ಕು ವರ್ಷ ತಡವಾಗಿದೆ.
ಭಾನುವಾರ ಕೇವಲ ಪ್ರತಿಮೆಯನ್ನು ತೆಗೆದುಕೊಂಡು ಬಂದು ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿಮೆ ಸುತ್ತಮುತ್ತ ಸಣ್ಣ ಪುಟ್ಟ ಕಾಮಗಾರಿ ಇದೆ. ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಬಳಿಕ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮವನ್ನು ಬಿಬಿಎಂಪಿ ಆಡಳಿತಾಧಿಕಾರಿ ಮತ್ತು ಮುಖ್ಯ ಆಯುಕ್ತರು ನಿರ್ಧಾರ ಮಾಡಲಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಸವೇಶ್ವರ ಪ್ರತಿಮೆ ಅಳವಡಿಕೆ ವೇಳೆ ಮಾಜಿ ಮೇಯರ್ ಗಂಗಾಬಿಕೆ, ಮಾಜಿ ಉಪಮೇಯರ್ ಬಿ.ಎಸ್. ಪುಟ್ಟರಾಜು, ಬಸವೇಶ್ವರ ಪ್ರತಿಮೆ ಪ್ರತಿಷ್ಠಾನ ಸಮಿತಿಯ ಸಂಚಾಲಕ ಎಚ್.ಆರ್. ಮಲ್ಲಿಕಾರ್ಜುನ್, ಪ್ರತಿಮೆ ಶಿಲ್ಪಿ ಜಗದೀಶ್, ಬಿಬಿಎಂಪಿ ಅಧಿಕಾರಿಗಳು ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.