ಬಸವೇಶ್ವರ ಜಾತ್ರೆಯಲ್ಲಿ ಗಮನ ಸೆಳೆದ ಆಕರ್ಷಕ ಸಿಡಿಮದ್ದು

ಬಸವನಬಾಗೇವಾಡಿ:ಸೆ.21: ಪಟ್ಟಣದ ಮೂಲ ನಂದೀಶ್ವರ(ಬಸವೇಶ್ವರ) ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಬಸವೇಶ್ವರ ದೇವಸ್ಥಾನದ ಅಂತರಾಷ್ಟ್ರೀಯ ಶಾಲಾ ಆವರಣದಲ್ಲಿ ಸೋಮವಾರ ಸಂಜೆ ಆಕರ್ಷಕ ಮನಮೋಹಕ ಸಿಡಿ ಮದ್ದು ಕಾರ್ಯಕ್ರಮ ಜರುಗಿತು.
ಮಹಾರಾಷ್ಟ್ರ ಆಂದ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯಯ ಭಕ್ತರು ಜಾತ್ರೆಗೆ ಆಗಮಿಸಿದ್ದರು ಬೆಳಿಗ್ಗೆಯಿಂದ ಮದ್ದು ಸುಡುವ ಕಾರ್ಯಕ್ರಮವನ್ನು ವಿಕ್ಷೀಸಲು ಕಾತುರದಿಂದ ಕಾಯುತ್ತಿದ್ದರು. ಪಟ್ಟಣದಲ್ಲಿ ಬೆಳಿಗ್ಗೆಯಿಂದ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು ಸಂಜೆ ಹೊತ್ತಿಗೆ ಮಳೆ ಕಡಿಮೆಯಾಗುತ್ತಿದ್ದಂತೆ ಮದ್ದು ಸುಡುವ ಕಾರ್ಯಕ್ರಮ ಆರಂಭವಾಯಿತು.
ಶಾಲೆಯ ಆವರಣದಲ್ಲಿ ರಾಷ್ಟ್ರೀಯ ಬಸವ ಸೈನ್ಯ, ಜಾತ್ರಾ ಉತ್ಸವ ಸಮಿತಿ, ಅಗಸಿ ಬಾಗಿಲು, ಚಂದ್ರಯಾನ 3 ಸೇರಿದಂತೆ ವಿವಿಧ ಬಗೆಯಲ್ಲಿ ಆಕೃತಿಗಳನ್ನ ಸಿದ್ದಪಡಿಸಲಾಗಿದ್ದು ಬಣ್ಣ ಬಣ್ಣದಲ್ಲಿ ಸಿಡಿ ಮದ್ದುಗಳು ನೋಡುಗರನ್ನ ಆಕರ್ಷಿಸಿದವು.
ಬಿರುಸು ಬಾಣ, ರಾಕೆಟ್‍ಗಳು ಬಾರಿ ಶಬ್ದದೊಂದಿಗೆ ಆಕಾಶದಲ್ಲಿ ಬಣ್ಣ ಬಣ್ಣದ ಚಿತ್ತಾರವನ್ನ ಬಿಡಿಸಿದರೆ ಚಕ್ರದ ಆಕೃತಿಯಲ್ಲಿರುವ ಸಿಡಿ ಮದ್ದು ಬೆಳಕಿನ ಚಿತ್ತಾರವನ್ನ ಮೂಡಿಸುವುದರೊಂದಿಗೆ ನೋಡುಗರ ಗಮನ ಸೆಳೆಯುವಂತಿತ್ತು.
ಮದ್ದು ಸುಡುವ ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ ಪ್ರೇಕ್ಷಕರು ಬೆಳಕಿನ ವೈಭವವನ್ನು ಕಂಡು ಬೆರಗಾದರು. ಬಣ್ಣ ಬಣ್ಣದ ಚಿತ್ತಾರಗಳನ್ನು ಕಂಡ ಜನತೆ ಹರ್ಷೋದ್ಗಾರದೊಂದಿಗೆ ಕುಣಿದು ಕುಪ್ಪಳಿಸುತ್ತಾ ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯುತ್ತಿರುವುದು ಸಾಮಾನ್ಯವಾಗಿತ್ತು,
ಸುಮಾರು ಒಂದು ಘಂಟೆಗೂ ಹೆಚ್ಚು ಕಾಲ ನಡೆದ ಮನಮೋಹಕ ಮದ್ದು ಸುಡುವ ಕಾರ್ಯಕ್ರಮ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.
ಈ ಸಂದರ್ಭದಲ್ಲಿ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ರಾಷ್ಟ್ರೀಯ ಬಸವ ಸೈನ್ಯ ಕಾರ್ಯಕರ್ತರು, ಬಸವ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿದಂತೆ ಅಪಾರ ಸಂಖ್ಯಯ ಸಾರ್ವಜನಿಕರು ಉಪಸ್ಥಿತರಿದ್ದರು.