ಬಸವೇಶ್ವರ್ ಆಸ್ಪತ್ರೆಯಲ್ಲಿ ಮೂರು ದಿನಗಳ ಉಚಿತ ಕಿವಿ ತಪಾಸಣೆ ಶಿಬಿರ

ಕಲಬುರಗಿ:ಫೆ.28: ವಿಶ್ವ ಶ್ರವಣ ದಿನಾಚರಣೆ ನಿಮಿತ್ಯ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ್ ತರಬೇತಿ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾರ್ಚ್ 1ರಿಂದ ಮೂರು ದಿನಗಳವರೆಗೆ ಉಚಿತ ಕಿವಿ ತಪಾಸಣೆ ಶಿಬಿರ ಹಾಗೂ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಶ್ರವಣ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಕಿರಣ್ ದೇಶಮುಖ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಕಿವಿಯ ಕುರಿತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷಿಸುತ್ತಿದ್ದಾರೆ. ಹಾಗಾಗಿ ಬಹಳಷ್ಟು ಜನರಿಗೆ ಕಿವಿಗಳು ಸರಿಯಾಗಿ ಕೇಳುತ್ತಿಲ್ಲ. ಹೀಗಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಮಾರ್ಚ್ 1ರಂದು ಕಿವಿ ಕೇಳುವುದಕ್ಕೆ ಶ್ರವಣ ಯಂತ್ರ ಬಿಟ್ಟು ಉಳಿದ ಎಲ್ಲ ತಪಾಸಣೆ ಉಚಿತವಾಗಿರುತ್ತದೆ. ನಂತರ ಮಾರ್ಚ್ 2ರಂದು ನಗರದ ರಾಜಾಪೂರ್ ಬಡಾವಣೆಯಲ್ಲಿ ಉಚಿತ ತಪಾಸಣೆ ಮತ್ತು ಜಾಗೃತಿ ಅಭಿಯಾನ, ಆಜಾದಪೂರ್ ರಸ್ತೆಯಲ್ಲಿನ ಸಿದ್ದಾರ್ಥ ಮಾಧ್ಯಮ ಶಾಲೆಯಲ್ಲಿ ಆರೋಗ್ಯ ದಿನದ ನಿಮಿತ್ಯ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಮಾರ್ಚ್ 3ರಂದು ಬಸವೇಶ್ವರ್ ಆಡಿಟೋರಿಯಂ ಹಾಲ್‍ನಲ್ಲಿ ಕಿವಿಗೆ ಸಂಬಂಧಿಸಿದಂತೆ ಖ್ಯಾತ ವೈದ್ಯರಾದ ಡಾ. ಅರುಂಧತಿ ಪಾಟೀಲ್, ಡಾ. ಪ್ರೇರಣಾ ಪಿ., ರವೀಂದ್ರ ಸರಸಂಭಾ ಅವರಿಂದ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ. ಎಸ್.ಎಂ. ಪಾಟೀಲ್, ಡಾ. ಬಸವರಾಜ್ ಪಾಟೀಲ್, ಸಿ.ಬಿ. ನಂದ್ಯಾಳ್, ಚಂದ್ರಶೇಖರ್ ಟೆಂಗಳಿ, ರವೀಂದ್ರ ಸರಸಂಬೆ ಮುಂತಾದವರಿಂದ ಉಪಸ್ಥಿತರಿದ್ದರು.