ಬಸವೇಶ್ವರರ ಚಿಂತನೆ ಸೇವೆಗೆ ಸ್ಫೂರ್ತಿ

ನವದೆಹಲಿ,ಏ.೨೩- ವಿಶ್ವ ಮಾನವತಾವಾದಿಯ ಬಸವಣ್ಣನವರ ಜಯಂತಿ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲೇ ಟ್ವೀಟ್ ಮಾಡಿ, ಅವರ ಸಂದೇಶಗಳನ್ನು ಸಾರುವ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.
ನಾಡಿನೆಲ್ಲೆಡೆ ಇಂದು ಬಸವ ಜಯಂತಿ ಆಚರಣೆ ಮಾಡಲಾಗುತ್ತಿದ್ದು, ವಿಶ್ವಕ್ಕೆ ಸಮಾನತೆ ಸಂದೇಶ ಸಾರಿದ ಕವಿ ಮತ್ತು ಸಮಾಜ ಸುಧಾರಕ ಬಸವೇಶ್ವರರ ಚಿಂತನೆಗಳು ಮತ್ತು ಆದರ್ಶಗಳು ಮಾನವೀಯತೆಯ ಸೇವೆಗೆ ಸ್ಫೂರ್ತಿ ನೀಡುತ್ತವೆ ಎಂದು ಮೋದಿ ಬಣ್ಣಿಸಿದ್ದಾರೆ.
ಬಸವ ಜಯಂತಿಯ ಇಂದಿನ ಪವಿತ್ರ ದಿನದಂದು ನಾನು ಜಗದ್ಗುರು ಬಸವೇಶ್ವರರಿಗೆ ಶಿರಸಾ ವಂದಿಸುತ್ತೇನೆ. ಅವರ ಆಲೋಚನೆಗಳು ಮತ್ತು ಚಿಂತನೆಗಳು ಮನುಕುಲಕ್ಕೆ ಸೇವೆ ಮಾಡಲು ಪ್ರೇರಣೆ ನೀಡುತ್ತವೆ. ದಮನಿತರನ್ನು ಸಬಲಗೊಳಿಸಲು ಒತ್ತು ನೀಡುತ್ತಾ ಮತ್ತು ಸದೃಢ ಮತ್ತು ಸಮೃದ್ಧ ಸಮಾಜ ನಿರ್ಮಾಣಕ್ಕೆ ಅವರು ಕೊಡುಗೆ ನೀಡಿದ್ದಾರೆ ಎಂದಿದ್ದಾರೆ.
ಇಂಗ್ಲೆಂಡ್‌ನಲ್ಲಿ ೨೦೧೫ ರಲ್ಲಿ ಬಸವೇಶ್ವರ ಪುತ್ಥಳಿಯನ್ನು ಪ್ರಧಾನಿ ಮೋದಿ ಅವರು ಅನಾವರಣ ಮಾಡಿದ್ದರು. ಈ ವಿಡಿಯೋವನ್ನು ಬಿಜೆಪಿ ನಾಯಕ ಶಿವಕುಮಾರ್ ಉದಾಸಿ ಅವರು ಹಂಚಿಕೊಂಡಿದ್ದರು. ಇದನ್ನು ಮರು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಜಗದ್ಗುರು ಬಸವೇಶ್ವರರು ತೋರಿದ ಮಾರ್ಗದಲ್ಲಿ ನಾವು ಸದಾ ಸಾಗುತ್ತೇವೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಹಲವು ಅವಕಾಶಗಳು ಸಿಕ್ಕಿರುವುದು ನನಗೆ ಗೌರವ ತಂದಿದೆ ಎಂದಿದ್ದಾರೆ.