ಬೀದರ್: ಎ.23:ಬಸವ ಜಯಂತಿ ಅಂಗವಾಗಿ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಪರಂಪರೆ ನಗರದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಯಿತು.
ಸಿದ್ಧಾರೂಢ ಮಠದಿಂದ ಆರಂಭಗೊಂಡ ರ್ಯಾಲಿಯು ಬಿ.ವಿ. ಭೂಮರಡ್ಡಿ ಕಾಲೇಜು, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ, ಗುದಗೆ ಆಸ್ಪತ್ರೆ ಕ್ರಾಸ್, ರೋಟರಿ ವೃತ್ತ, ಮಡಿವಾಳ ಮಾಚಿದೇವ ವೃತ್ತ, ಕೇಂದ್ರ ಬಸ್ ನಿಲ್ದಾಣ, ಶಿವನಗರ ಮಾರ್ಗವಾಗಿ ಪಾಪನಾಶ ದೇಗುಲಕ್ಕೆ ತೆರಳಿ ಸಮಾರೋಪಗೊಂಡಿತು.
ರ್ಯಾಲಿಯಲ್ಲಿ ಬೈಕ್, ಕಾರುಗಳಿಗೆ ಷಟ್‍ಸ್ಥಲ ಧ್ವಜ ಕಟ್ಟಲಾಗಿತ್ತು. ಬಸವಾನುಯಾಯಿಗಳು ಕೊರಳಲ್ಲಿ ಶಲ್ಯ, ತಲೆ ಮೇಲೆ ಪೇಟ ಧರಿಸಿದ್ದರು. ರ್ಯಾಲಿಯ ಉದ್ದಕ್ಕೂ ಬಸವ ಜಯ ಘೋಷ ಮೊಳಗಿದರು. ಭಾರತ ದೇಶ ಜೈ ಬಸವೇಶ, ವಿಶ್ವಗುರು ಬಸವಣ್ಣನವರಿಗೆ ಜಯವಾಗಲಿ ಎಂಬಿತ್ಯಾದಿ ಘೋಷಣೆಗಳು ಮುಗಿಲು ಮುಟ್ಟಿದವು.
ಮಹಿಳಾ ಘಟಕದ ಪದಾಧಿಕಾರಿಗಳು ರ್ಯಾಲಿಯ ಮುಂಚೂಣಿಯಲ್ಲಿ ಇದ್ದರು. ಬೈಕ್‍ಗಳ ಹಿಂಭಾಗದಲ್ಲಿ ಕಣ್ಣು ಹಾಯಿಸಿದುದ್ದಕ್ಕೂ ಕಾರುಗಳು ಇದ್ದವು. ರ್ಯಾಲಿ ಶಿಸ್ತು ಬದ್ಧವಾಗಿ ನಡೆದದ್ದು ವಿಶೇಷವಾಗಿತ್ತು. ರ್ಯಾಲಿಯಲ್ಲಿ ಪಾಲ್ಗೊಂಡವರಿಗೆ ಸಮಿತಿ ವತಿಯಿಂದ ಪಾಪನಾಶ ಪರಿಸರದಲ್ಲಿ ಹುಗ್ಗಿ, ಅನ್ನ, ಸಾಂಬಾರು ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಇದಕ್ಕೂ ಮುನ್ನ ಸಿದ್ಧಾರೂಢ ಮಠದ ಬಳಿ ಮುಖಂಡ ಚಂದ್ರಶೇಖರ ಪಾಟೀಲ ಗಾದಗಿ ಅವರು ಹಸಿರು ನಿಶಾನೆ ತೋರಿಸಿ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.
ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ ಅವರು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿ, ಮಹಾತ್ಮರು ಜಗತ್ತನ್ನು ಉದ್ಧರಿಸುವುದಕ್ಕಾಗಿಯೇ ಬರುತ್ತಾರೆ. ಬಸವಣ್ಣನವರು ಮನುಕುಲವೆಲ್ಲ ಒಂದೇ ಎನ್ನುವ ಸಂದೇಶ ಸಾರಿದ್ದರು ಎಂದು ಹೇಳಿದರು.
ಬಸವ ಜಯಂತಿಯನ್ನು ನಗರದಲ್ಲಿ ಸಂಭ್ರಮ, ಸಡಗರದಿಂದ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದರು.
ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ಈ ಬಾರಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಜಯಂತಿ ಪ್ರಚಾರಾರ್ಥವಾಗಿ ಹಮ್ಮಿಕೊಂಡಿರುವ ಬೈಕ್ ರ್ಯಾಲಿಯಲ್ಲಿ ಬಸವ ಭಕ್ತರು ಅಪಾರ ಸಂಖ್ಯೆಯಲ್ಲಿ ಬೈಕ್‍ಗಳೊಂದಿಗೆ ಪಾಲ್ಗೊಂಡಿರುವುದು ಎಲ್ಲರ ಉತ್ಸಾಹ ಇಮ್ಮಡಿಗೊಳಿಸಿದೆ ಎಂದು ಹೇಳಿದರು.
ಬಸವ ಜಯಂತಿಯ ವಿವಿಧ ಕಾರ್ಯಕ್ರಮಗಳಲ್ಲಿ ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಜಿ.ಎನ್. ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಮುಖಂಡರಾದ ಈಶ್ವರಸಿಂಗ್ ಠಾಕೂರ್, ಬಸವರಾಜ ಧನ್ನೂರ, ಸೋಮಶೇಖರ ಪಾಟೀಲ ಗಾದಗಿ, ಕುಶಾಲರಾವ್ ಪಾಟೀಲ ಖಾಜಾಪುರ, ರಾಜಶೇಖರ ಮಂಗಲಗಿ, ಬಸವರಾಜ ಜಕ್ಕಾ, ಬಸವ ಜಯಂತಿ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ ಚನಶೆಟ್ಟಿ, ದೀಪಕ್ ವಾಲಿ, ತರುಣ್ ಎಸ್. ನಾಗಮಾರಪಳ್ಳಿ, ಶಿವಕುಮಾರ ಕಟ್ಟೆ, ಶಶಿಧರ ಹೊಸಳ್ಳಿ, ಅರುಣ ಹೋತಪೇಟ್, ಧನರಾಜ ಹಂಗರಗಿ, ವಿರೂಪಾಕ್ಷ ಗಾದಗಿ, ಮಹಿಳಾ ಘಟಕದ ಅಧ್ಯಕ್ಷೆ ನೀಲಮ್ಮ ರೂಗನ್ ಮೊದಲಾದವರು ಪಾಲ್ಗೊಂಡಿದ್ದರು.