ಬಸವಾದಿ ಶರಣರ ಆಶಯದ ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ಶಕ್ತಿ ಯೋಜನೆಗೆಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರಿಂದ ಚಾಲನೆ

ವಿಜಯಪುರ:ಜೂ.12: ಮಹಿಳೆಯರ ಸಬಲೀಕರಣವಾಗಬೇಕೆಂಬ 12ನೇ ಶತಮಾನದ ಬಸವಾದಿ ಶರಣರ ಆಶಯದಂತೆ ಮಹಿಳೆಯರ ಮುನ್ನಲೆಗೆ ಪೂರಕವಾಗಿ ಇಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರೂ ಆದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.
ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವತಿಯಿಂದ ಆಯೋಜಿಸಲಾದ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಹವಾನಿಯಂತ್ರದ ಬಸ್‍ಗಳನ್ನು ಹೊರತುಪಡಿಸಿ ಉಳಿದಂತೆ ಪ್ರತಿಶತ 94 ರಷ್ಟು ರಾಜ್ಯದ ಸಾರಿಗೆ ಬಸ್‍ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಹೇಳಿದರು.
ಇಂದಿನ 21ನೇ ಶತಮಾನದಲ್ಲಿ ಎಲ್ಲ ರಂಗಗಳಲ್ಲೂ ಮಹಿಳೆ ಮುಂಚೂಣಿಯಲ್ಲಿರಲು ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಸಹಕಾರಿಯಾಗಲಿದೆ. ಸಮಾಜದಲ್ಲಿ ಮಹಿಳೆಯರ ಬಹುದೊಡ್ಡ ಪಾತ್ರವಿದೆ. ಮಹಿಳೆ ತ್ಯಾಗಜೀವಿ, ಮಹಿಳೆ ತಾಯಿಯಾಗಿ, ಮಗಳಾಗಿ, ಹೆಂಡತಿಯಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಾಳೆ. ಎಲ್ಲ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕ ಹಾಗೂ ಸಮರ್ಥವಾಗಿ ನಿಭಾಯಿಸುವ ಮಹಿಳೆಯರ ಪ್ರತಿಯಾಗಿ ಸಮಾಜ ಹಾಗೂ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು, ಉದ್ಯೋಗಸ್ಥ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಅತ್ಯಂತ ಸಹಕಾರಿಯಾಗುವುದರೊಂದಿಗೆ ಮಹಿಳಾ ಸಬಲೀಕರಣದ ಶರಣರ ಆಶಯದಂತೆ ಸಮಾನತೆಯತ್ತ ನಮ್ಮ ಸರ್ಕಾರ ಹೆಜ್ಜೆ ಇಟ್ಟಿದೆ. ಬ್ರಿಟಿಷರ್ ವಿರುದ್ದ ಹೋರಾಡಿದ ಧೀರ ಮಹಿಳೆ ವೀರರಾಣಿ ಕಿತ್ತೂರು ಚೆನ್ನಮ್ಮ ಹೆಸರನ್ನು ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕಿಡಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ನಮ್ಮ ಸರ್ಕಾರ ನೀಡಿರುವ 5 ಗ್ಯಾರಂಟಿಗಳಲ್ಲಿ ಪ್ರಥಮವಾಗಿ ಇಂದು ಶಕ್ತಿ ಯೋಜನೆಗೆ ರಾಜ್ಯದಾದ್ಯಂತ ಚಾಲನೆ ದೊರೆತಿದ್ದು, ಸರ್ಕಾರ ನೀಡಿರುವ ಎಲ್ಲ ಭರಸವೆಗಳನ್ನು ಯಾವುದೇ ಅಡೆ-ತಡೆ ಇಲ್ಲದೇ, ರಾಜ್ಯದ ಅಭಿವೃದ್ದಿಗೆ ಯಾವುದೇ ಬಾಧೆಯಾಗದಂತೆ ಜಾರಿಗೊಳಿಸಲಾಗುವುದು. ಈ ಕುರಿತು ಯಾವುದೇ ಗೊಂದಲ ಮೂಡಿಸುವ ಅಗತ್ಯವಿಲ್ಲ. ಯೋಜನೆಗಳ ಜಾರಿಯಿಂದÀ ಅಭಿವೃದ್ದಿ ಕುಂಠಿತವಾಗುತ್ತದೆ ಎಂಬ ವಿನಾಕಾರಣ ಗೊಂದಲ ಸೃಷ್ಟಿಸಲಾಗುತ್ತಿದೆ. 12 ರಿಂದ 13 ಸಲ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಆರ್ಥಿಕ ತಜ್ಞರೆಂದರೆ ತಪ್ಪಾಗಲಾರದು. ರಾಜ್ಯದ ಸಮಗ್ರ ಅಭಿವೃದ್ದಿಯ ಸವಾಲನ್ನು ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ ಎಲ್ಲ ಗ್ಯಾರಂಟಿಗಳು, ಯೋಜನೆಗಳ ಜಾರಿ, ರಾಜ್ಯದ ಅಭಿವೃದ್ದಿಯ ಸಮತೋಲನ ಮಾಡಿ ಯಾವುದೇ ಗೊಂದಲವಿಲ್ಲದೇ ಅಭಿವೃದ್ದಿ ಜೊತೆಗೆ ಜನಕಲ್ಯಾಣ ಯೋಜನೆಗಳನ್ನು ಜಾರಿ ಮಾಡಿ, ಅನುಷ್ಠಾನಗೊಳಿಸುವ ಮೂಲಕ ರಾಜ್ಯವನ್ನು ಅಭಿವೃದ್ದಿಪಥದಲ್ಲಿ ಕೊಂಡೊಯ್ಯಲಾಗುವುದು ಎಂದು ಅವರು ಹೇಳಿದರು.
ಕಳೆದ ನಮ್ಮ ಸರ್ಕಾರದ ಅವಧಿಯಲ್ಲಿ ನೀಡಿದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆಯಲಾಗಿದೆ. ಈ ಅವಧಿಯಲ್ಲಿಯೂ ಸಹ ನಾವು ನೀಡಿದ ಶಕ್ತಿ ಯೋಜನೆ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯದಡಿ 10 ಕೆಜಿ. ಅಕ್ಕಿ ನೀಡುವುದು ಸೇರಿದಂತೆ ಎಲ್ಲ ಗ್ಯಾರಂಟಿಗಳನ್ನು ಕೆಲವೇ ದಿನಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ನಾಗಠಾಣ ಮತಕ್ಷೇತ್ರದ ಶಾಸಕರಾದ ವಿಠ್ಠಲ ಕಟಕದೊಂಡ ಅವರು ಮಾತನಾಡಿ, ಶಕ್ತಿ ಯೋಜನೆ ಜಾರಿಯಿಂದ ಜನಸಾಮಾನ್ಯ, ಬಡವರಿಗೆ ಅನುಕೂಲ ಒದಗಿಸುವ ಯೋಜನೆಯಾಗಿದೆ. ಮಹಿಳೆಯರ ಅಭ್ಯುದಯಕ್ಕಾಗಿ ಹೆಚ್ಚಿನ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ನಮ್ಮ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿದ್ದು ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು, ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ದೊರೆತಿದ್ದು, ಈ ಯೋಜನೆಯಡಿ ವಿದ್ಯಾರ್ಥಿನಿಯರು ಸೇರಿದಂತೆ ರಾಜ್ಯದ ಮಹಿಳೆಯರು 6ರಿಂದ 12 ವರ್ಷದ ಬಾಲಕಿಯರು, ಲಿಂಗತ್ವ ಅಲ್ಪಸಂಖ್ಯಾತರು ರಾಜ್ಯದಾದ್ಯಂತ ಉಚಿತವಾಗಿ ಪ್ರಯಾಣಿಸಬಹುದಾಗಿದ್ದು, ರಾಜ್ಯದೊಳಗೆ ಯಾವುದೇ ದೂರದ ಮಿತಿ ಇರುವುದಿಲ್ಲ ಎಂದು ಅವರು ಹೇಳಿದರು.
ನಿಗಮದ ಸಾರಿಗೆ ಬಸ್‍ಗಳಲ್ಲಿ ಪ್ರಯಾಣಿಸುವ ಮಹಿಳೆಯರು ಕರ್ನಾಟಕ ರಾಜ್ಯದ ನಿವಾಸಿಗಳೆಂಬ ಪುರಾವೆಗಳಿಗಾಗಿ ಆಧಾರ ಕಾರ್ಡ, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಿಗೆ ಪತ್ರ, ವಾಸಸ್ಥಳ ನಮೂಸಿರುವ ಭಾರತ ಸರ್ಕಾರದ ಇಲಾಖೆಗಳು, ಸಾರ್ವಜನಿಕ ವಲಯದ ಉದ್ದಿಮೆ, ಸಂಸ್ಥೆಗಳು ವಿತರಿಸಿರುವ ಗುರುತಿನ ಚೀಟಿ, ಕರ್ನಾಟಕ ಸರ್ಕಾರದ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯ ವಿತರಿಸಿರುವ ಗುರುತಿನ ಚೀಟಿ ಸೇರಿದಂತೆ ಇವುಗಳಲ್ಲಿ ಯಾವುದಾದರೊಂದು ಮೂಲ ಗುರುತಿನ ಚೀಟಿ ನಿರ್ವಾಹಕರಿಗೆ ತೋರಿಸುವ ಮೂಲಕ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಹೇಳಿದರು.
ಸೇವಾ ಸಿಂಧು ಮೂಲಕ ಶಕ್ತಿ ಸ್ಮಾರ್ಟ್ ಕಾರ್ಡ ವಿತರಿಸುವರೆಗೆ ಕರ್ನಾಟಕ ರಾಜ್ಯದ ಎಲ್ಲ ಮಹಿಳಾ ಪ್ರಯಾಣಿಕರು ಪ್ರಯಾಣದ ಸಂದರ್ಭದಲ್ಲಿ ಕಡ್ಡಾಯವಾಗಿ ಶೂನ್ಯ ಮೊತ್ತದ ಉಚಿತ ಟಿಕೆಟ್ ಪಡೆಯಬೇಕಾಗುತ್ತದೆ. ವಿಜಯಪುರ ನಿಗಮದ ಸಾರಿಗೆ ಬಸ್‍ಗಳಲ್ಲಿ ಒಟ್ಟಾರೆ 515 ಮಾರ್ಗಗಳಲ್ಲಿ ಸಂಚರಿಸಲು ಅವಕಾಶ ಕಲ್ಪಿಸುವುದರೊಂದಿಗೆ ಶೇ.78.1 ರಷ್ಟು ಮಾರ್ಗಗಳಿಗೆ ಅನುಮತಿಸಲಾಗಿದೆ. ಪ್ರತಿ ದಿನ ನಿಗಮದ ಬಸ್‍ಗಳಲ್ಲಿ 1.18 ಲಕ್ಷ ಹಾಗೂ ಮಾಸಿಕ 35.40 ಲಕ್ಷ ಮಹಿಳಾ ಪ್ರಯಾಣಿಕರು, ಪ್ರತಿದಿನ 1.22 ಲಕ್ಷ ಹಾಗೂ ಮಾಸಿಕ 36.60 ಲಕ್ಷ ಪುರುಷ ಪ್ರಯಾಣಿಕರು ಸಾರಿಗೆ ಬಸ್‍ಗಳಲ್ಲಿ ಪ್ರಯಾಣಿಸುತ್ತಾರೆ ಎಂದು ಹೇಳಿದರು.
ಬೃಹತ್ ಹಾಗೂ ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರೂ ಆದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಂತರ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಸಿಟಿ ಬಸ್ಸಿನಲ್ಲಿ ಕುಳಿತು ಸೆಟ್‍ಲೈಟ್ ಬಸ್‍ಸ್ಟ್ಯಾಂಡ್‍ವರೆಗೆ ಸಂಚರಿಸಿ, ಬಸ್ ನಿಲ್ದಾಣದಲ್ಲಿರುವ ಮಹಿಳಾ ಪ್ರಯಾಣಿಕರಿಗೆ ಶುಭಕೋರಿ ಯೋಜನೆ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಮಹಾನರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಮಹಾನಗರ ಪಾಲಿಕೆ ಸದಸ್ಯರಾದ ಅಬ್ದುಲರಜಾಕ ಹೊರ್ತಿ, ಆರತಿ ಶಹಾಪುರ, ದಿನೇಶ ಹಳ್ಳಿ, ಆಸೀಫ್ ಶಾನವಾಲೆ, ರಾಜು ಚವ್ಹಾಣ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಜಾತಾ ಕಳ್ಳಿಮನಿ ಕಕರಸಾ ನಿಗಮದ ಕಲ್ಬುರ್ಗಿ ಕೇಂದ್ರ ಕಚೇರಿಯ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣ ಅಧಿಕಾರಿ ಡಿ.ಕೊಟ್ರಪ್ಪ, ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎಸ್.ಹಿರೇಮಠ ನಿಗಮದ ಮಾಂತೇಶ ಕರಾಳೆ, ಜಗನ್ನಾಥ ಜೋಗಣ್ಣವರ, ಜೆ.ಕೆ.ಹುಗ್ಗೇನ್ನವರ, ಸೇರಿದಂತೆ ಕೆಕೆಆರ್‍ಟಿಸಿ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.