ಬಸವಾದಿ ಶರಣರ ಆಶಯದಂತೆ ಸರ್ಕಾರದ ಆಡಳಿತ: ಡಾ.ಎಂ.ಬಿ. ಪಾಟೀಲ

ವಿಜಯಪುರ,ಫೆ.18:ಜಿಲ್ಲೆಯ ಬಸವನ ಬಾಗೇವಾಡಿಯ ಇಂಗಳೇಶ್ವರಲ್ಲಿ ಜನಿಸಿದ ಅಣ್ಣ ಬಸವಣ್ಣ ಅವರನ್ನು ಕರ್ನಾಟಕ ರಾಜ್ಯದ ಸಾಂಸ್ಕøತಿಕ ನಾಯಕ ಎಂದು ಕ್ಯಾಬಿನೆಟ್‍ನಲ್ಲಿ ನಿರ್ಣಯ ಮಾಡುವ ಮೂಲಕ ಬಸವಣ್ಣನವರಿಗೆ ಗೌರವ ಸೂಚಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ, ಮೂಲ ಸೌಲಭ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.
ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಶನಿವಾರ ನಡೆದ ವಿಶ್ವಗುರು ಬಸವಣ್ಣ ಕರ್ನಾಟಕದ ಸಾಂಸ್ಕøತಿಕ ನಾಯಕ ಭಾವಚಿತ್ರ ಅನಾವರಣಗೊಳಿಸಿ, ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳ ಬಳಿ ಈ ಬಗ್ಗೆ ಮನವಿ ಸಲ್ಲಿಸಿದ ಕ್ಷಣವೇ ಬಸವಣ್ಣ ಅವರನ್ನು ಸಾಂಸ್ಕøತಿಕ ನಾಯಕ ಎಂದು ಘೋಷಣೆ ಮಾಡಲು ಅವರು ಒಪ್ಪಿಗೆ ಸೂಚಿಸಿದರು. 12ನೇ ಶತಮಾನದಲ್ಲಿ ಬಸವಣ್ಣ ಅವರು ಪ್ರತಿಪಾದಿಸಿದ ಜಾತಿರಹಿತ ಸಮಾಜ, ಕಾಯಕದ ಮಹತ್ವ, ವರ್ಗರಹಿತ ಸಮಾಜದ ಕನಸು ಕಂಡು ನಮ್ಮ ನಡೆನುಡಿಗಳಲ್ಲಿ ಭಿನ್ನತೆ ಇರಬಾರದು ಎಂಬುದನ್ನು ಬಸವಾದಿ ಪ್ರಮಥರು ತಮ್ಮ ವಚನದ ಮೂಲಕ ಸಾರಿದ್ದಾರೆ. ಅವರ ಪ್ರತಿಪಾದಿಸಿದ ಉದಾತ್ತ ತತ್ವಗಳು ಎಂದೆಂದಿಗೂ ಪ್ರಸ್ತುತವಾಗಿವೆ. ಇಂದು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿ ಸರ್ಕಾರವು ಅನುಮೋದಿಸಿರುವ ಶ್ರೀ ಬಸವಣ್ಣನವರ ಭಾವಚಿತ್ರದಲ್ಲಿ ವಿಶ್ವಗುರು ಬಸವಣ್ಣ ಸಾಂಸ್ಕøತಿಕ ನಾಯಕ ಎಂದು ನಮೂದಿಸಿ ಅಳವಡಿಸಲಾಗುತ್ತಿದೆ ಎಂದು ಹೇಳಿದರು.
ಮೇಲು-ಕೀಳು ಭಾವನೆ ತೆಗೆದು ಹಾಕಿ, ಮೂಢನಂಬಿಕೆ ವಿರೋಧಿಸಿ, ಮಹಿಳೆಯರಿಗೆ ಸಮಾನತೆ ನೀಡಿ ಸಾಮಾಜಿಕ ನ್ಯಾಯ ಒದಗಿಸಿ ಅನುಭವ ಮಂಟಪದ ಮೂಲಕ ಜಗತ್ತಿನ ಮೊಟ್ಟ ಮೊದಲ ಪಾರ್ಲಿಮೆಂಟ್ ಪರಿಕಲ್ಪನೆ ನೀಡಿದವರು ಬಸವಾದಿ ಪ್ರಮಥರು. ಎಲ್ಲಾ ಕಾಯಕ ವರ್ಗದವರನ್ನು ಒಂದೆಡೆ ಸೇರಿಸಿ ಆಡು ಭಾಷೆಯಲ್ಲಿಯೇ ವಚನ ಚಳವಳಿಯ ಮೂಲಕ ಸಮಾಜವನ್ನು ತಿದಿ ಎಲ್ಲರೂ ಸರಿಸಮಾನರು ಎಂದು ಹೇಳಿ ಅದನ್ನು ಅನುಷ್ಠಾನಕ್ಕೆ ತಂದವರು ಬಸವಾದಿ ಶರಣರು ಎಂದು ಹೇಳಿದರು.
12ನೇ ಶತಮಾನದಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ನೀಡಿ. ಜಟಿಲವಾದ ಹಾಗೂ ಸಂದಿಗ್ಧ ವಿಚಾರಧಾರೆಗಳನ್ನು ವಚನಗಳನ್ನು ರಚಿಸಿದರು. ಬಸವಣ್ಣ ಹಾಗೂ ಶರಣರು ಅನಿಷ್ಠ ಪದ್ದತಿಗಳನ್ನು ದೂರ ಮಾಡಿ ಶ್ರೇಷ್ಠ ಸಿದ್ಧಾಂತ ನೀಡಿ ಮಾನವೀಯತೆ, ಮನುಷ್ಯತ್ವವನ್ನು ಸಾರಿ ಸಾರಿ ಹೇಳಿದವರು. ಬಸವಣ್ಣನವರು ಹೇಳಿದ ಅಂಶಗಳು ಸಂವಿಧಾನದಲ್ಲಿವೆ. ಬುದ್ಧ, ಬಸವ, ಅಂಬೇಡ್ಕರ್‍ರವರು ಸಮ ಸಮಾಜದ ಕನಸು ಕಂಡವರು. ನಮ್ಮ ಸರ್ಕಾರ ಬಸವಾದಿ ಶರಣರ ತತ್ವ ಅನುಸರಿಸುತ್ತಿದೆ. ನಾವೆಲ್ಲರೂ ಅವರ ವಿಚಾರ ಧಾರೆಗಳನ್ನು ಅಳವಡಿಸಿಕೊಂಡರೆ ಸುಂದರ ಸಮಾಜ ನಿರ್ಮಾಣವಾಗುತ್ತದೆ ಎಂದು ಅವರು ಹೇಳಿದರು.
ನಾಟಕ, ಯಕ್ಷಗಾನ, ವಚನಗೋಷ್ಠಿ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶರಣರ ವಚನಗಳ ಜಾಗೃತಿ ಮೂಡಿಸಿ, ಇಂದಿನ ಯುವಪೀಳಿಗೆ ಅವರ ಆದರ್ಶ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅನುಸರಿಸಬೇಕು ಎಂದು ಹೇಳಿದರು.
ನಾಗಠಾಣ ಶಾಸಕ ವಿಠಲ ಕಟಕದೊಂಡ ಅವರು ಮಾತನಾಡಿ, ಬಸವಣ್ಣ ಅವರು ನಮ್ಮ ಜಿಲ್ಲೆಯವರು ಅವರ ಆದರ್ಶ, ವಿಚಾರಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು. ಬಸವಾದಿ ಶರಣರ ವಚನಗಳನ್ನು ಜನತೆಗೆ ಮುಟ್ಟಿಸಿ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಮಾತನಾಡಿ, ತಮ್ಮ ಕಾಯಕವನ್ನು ನಿಷ್ಠೆಯಿಂದ ನಿರ್ವಹಿಸಿದರೆ ಅದೇ ಈ ಸಮಾಜಕ್ಕೆ ನೀಡುವ ಕೊಡುಗೆಯಾಗಿದೆ. ದಯವೇ ಧರ್ಮದ ಮೂಲವಯ್ಯ ಬಸವಣ್ಣನವರು ವಚನಗಳನ್ನು ಹೇಳುವ ಮೂಲಕ ವಚನಗಳಲ್ಲಿನ ಸಾರ ಮತ್ತು ಸಂದೇಶವನ್ನು ತಿಳಿಸಿದ್ದಾರೆ. ಶರಣರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮಹಾಪೌರ ಮಾಹೆಜಬೀನ್ ಹೊರ್ತಿ, ಉಪ ಮಹಾಪೌರ ದಿನೇಶ ಹಳ್ಳಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿಷಿ ಆನಂದ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದಿನ್ ಸೌದಾಗರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.