ಬಸವಾದಿ ಪ್ರಮಥರ ತತ್ವ ಸಿದ್ಧಾಂತ ಅನುಸರಿಸಿ: ನಿತೀನ್ ಗುತ್ತೇದಾರ್

ಅಫಜಲಪುರ:ಸೆ.4: 12ನೇ ಶತಮಾನದ ಬಸವಾದಿ ಶರಣರು ಸಮಾಜದಲ್ಲಿನ ಜಾತಿ ವ್ಯವಸ್ಥೆ, ಮೂಢನಂಬಿಕೆ ತೆಗೆದು ಹಾಕಲು ಶ್ರಮಿಸಿದರು ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ನಿತೀನ ಗುತ್ತೇದಾರ್ ತಿಳಿಸಿದರು.

ತಾಲೂಕಿನ ದೇವಲಗಾಣಗಾಪುರದ ಟಿ.ಕೆ ಹೇರೂರ್ ಅನುದಾನಿತ ಪ್ರೌಢ ಶಾಲೆಯಲ್ಲಿ ತಾಲೂಕಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳು ಸುತ್ತೂರವರ ಜನ್ಮದಿನದ ಅಂಗವಾಗಿ ಹಾಗೂ ಬಸವರಾಜ ಕೆಂಗನಾಳರ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಅವರ ಹೆಸರಿನ ಮೇಲೆ ನೀಡಿರುವ ದತ್ತಿ ಹಾಗೂ ವಚನ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶರಣ ಪರಂಪರೆ ನಮ್ಮ ನಾಡಿನಲ್ಲಿ ನಡೆದು ಬಂದಿರುವುದು ನಮ್ಮೆಲ್ಲರ ಸುದೈವ. ಹೀಗಾಗಿ ಇಂದಿನ ವಿದ್ಯಾರ್ಥಿಗಳು ಬಸವಾದಿ ಪ್ರಮಥರ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಬಸವರಾಜ ಚಾಂದಕವಟೆ ಮಾತನಾಡಿದರು.

ಈ ವೇಳೆ ಕೋಲಿ ಸಮಾಜದ ಮಾಜಿ ಅಧ್ಯಕ್ಷ ಶಂಕರ ಮ್ಯಾಕೇರಿ ಬಸವ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹೇರೂರ ಅಧ್ಯಕ್ಷತೆ ವಹಿಸಿದರು. ಶಿಕ್ಷಕ ಉಮೇಶ ಹೂಗಾರ ವಚನಗಳಲ್ಲಿ ಆರ್ಥಿಕ ಚಿಂತನೆ ಕುರಿತು ಉಪನ್ಯಾಸ ನೀಡಿದರು.