ಬಸವರಾಜ ಶಿವಣ್ಣನವರ ನಾಮಪತ್ರ ಸಲ್ಲಿಕೆ

ಬ್ಯಾಡಗಿ,ಏ20: ಪಟ್ಟಣದಾದ್ಯಂತ ಪ್ರಮುಖ ಬೀದಿಗಳಲ್ಲಿ ಬೊಂಬೆ ಕುಣಿತ, ಡೊಳ್ಳು, ತಮಟೆ ಸದ್ದಿನ ಅಬ್ಬರದೊಂದಿಗೆ ಕಾರ್ಯಕರ್ತರ ನೃತ್ಯದ ಅದ್ದೂರಿ ಮೆರವಣಿಗೆಯ ನಡುವೆ ಈ ಬಾರಿಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಸವರಾಜ ಶಿವಣ್ಣನವರ ತಮ್ಮ ಅಧಿಕೃತ ನಾಮಪತ್ರವನ್ನು ಗುರುವಾರ ಚುನಾವಣಾಧಿಕಾರಿಗೆ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ಕಳೆದ 2013ರಲ್ಲಿ ಶಾಸಕರಾಗಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ತಮಗೆ ಶ್ರೀರಕ್ಷೆಯಾಗಿವೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿದ್ದು, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬರುವುದು ಖಚಿತವಾಗಿದೆ ಎಂದರಲ್ಲದೇ, ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಸೇರಿಕೊಂಡು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಂಕಣ ಬದ್ಧರಾಗಿದ್ದಾರೆ. ಕ್ಷೇತ್ರದ ಮತದಾರರು ತಮ್ಮನ್ನು ಬಹುಮತದೊಂದಿಗೆ ಗೆಲ್ಲಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ, ಬ್ಲಾಕ್ ಅಧ್ಯಕ್ಷರಾದ ದಾನಪ್ಪ ಚೂರಿ, ಶಿವನಗೌಡ ಪಾಟೀಲ, ಮುಖಂಡರಾದ ಎಂ.ಎಂ.ಹಿರೇಮಠ, ಶಂಕ್ರಗೌಡ ಪಾಟೀಲ, ಸುರೇಶಗೌಡ ಪಾಟೀಲ, ಅಬ್ದುಲಮುನಾಫ ಎಲಿಗಾರ, ಪ್ರಕಾಶ ಬನ್ನಿಹಟ್ಟಿ, ನಾಗರಾಜ ಆನ್ವೇರಿ, ರಮೇಶ ಸುತ್ತಕೋಟಿ, ವೀರನಗೌಡ ಪೆÇಲೀಸ್‍ಗೌಡ್ರ, ಡಿ.ಎಚ್.ಬುಡ್ಡನಗೌಡ್ರ, ಮಂಜು ಭೋವಿ, ಬೀರಪ್ಪ ಬಣಕಾರ, ಖಾದರಸಾಬ ದೊಡ್ಡಮನಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಅಗಸನಹಳ್ಳಿಯ ಶಿಬಾರದಿಂದ ಪ್ರಾರಂಭಗೊಂಡ ಮೆರವಣಿಗೆಯು ತಾಲೂಕಾ ಕಚೇರಿಯವರೆಗೆ ಸಾಗಿತು. ಈ ಸಂದರ್ಭದಲ್ಲಿ
ಕಾರ್ಯಕರ್ತರು ಭಾರೀ ಗಾತ್ರದ ಸೇಬು ಹಣ್ಣಿನ ಮಾಲೆಯನ್ನು ನಾಯಕರ ಭಾವಚಿತ್ರಕ್ಕೆ ಹಾಕುವ ಮೂಲಕ ಸಂಭ್ರಮಿಸಿದರು. ಮೆರವಣಿಗೆಯುದ್ದಕ್ಕೂ ಮುಖಂಡರು ಮತ್ತು ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದು, ಬ್ಯಾಡಗಿ ಪಟ್ಟಣ ತುಂಬೆಲ್ಲಾ ಕಾಂಗ್ರೆಸ್ ಝೇಂಕಾರ ಮಾರ್ದನಿಸಿತ್ತು.