ಬಸವರಾಜ ಬೊಮ್ಮಾಯಿ ರಾಜ್ಯದ ದುರ್ಬಲ ಮುಖ್ಯಮಂತಿ: ಸಿದ್ದರಾಮಯ್ಯ

ಮೈಸೂರು,ಜು.29:- ರಾಜ್ಯದಲ್ಲಿ ಸರ್ಕಾರ ಸಂಪೂರ್ಣ ಸತ್ತಿದೆ. ಸರ್ಕಾರಕ್ಕೆ ಯಾರನ್ನೂ ಕೂಡ ರಕ್ಷಣೆ ಮಾಡಲು ಆಗುತ್ತಿಲ್ಲ. ಕಾನೂನಿನ ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಬಸವರಾಜ ಬೊಮ್ಮಾಯಿ ದುರ್ಬಲ ಮುಖ್ಯಮಂತ್ರಿ, ಗೃಹಸಚಿವರು ಮತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಸರ್ಕಾರ ಕಠಿಣವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಇದರ ಹೊಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೊರಬೇಕು. ಗೃಹಸಚಿವರು, ಮುಖ್ಯಮಂತ್ರಿಗಳು ಮಂತ್ರಿಗಳಾಗಿ ಮುಂದುವರಿಯಲು ಯಾವುದೇ ಅರ್ಹತೆ ಇಲ್ಲ. ರಾಜೀನಾಮೆ ಕೊಡಬೇಕು. ಅನೇಕ ಸಲ ಹೇಳಿದ್ದೇನೆ. ಅವರು ರಾಜೀನಾಮೆ ಕೊಟ್ಟು ಮನೆಗೆ ಹೋಗುವುದು ಒಳ್ಳೆಯದು. ಜನರಿಗೆ ರಕ್ಷಣೆ ಇಲ್ಲ, ಕಾನೂನಿನ ಸುವ್ಯವಸ್ಥೆ ಇಲ್ಲ. ಎಲ್ಲರೂ ಭಯ, ಆತಂಕದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸವರಾಜ ಬೊಮ್ಮಾಯಿ ದುರ್ಬಲ ಮುಖ್ಯಮಂತ್ರಿ ಎಂದು ವಾಗ್ದಾಳಿ ನಡೆಸಿದರು.
ಫಾಝಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಇದು ಮುಖ್ಯಮಂತ್ರಿ, ಗೃಹ ಸಚಿವರ ವೈಫಲ್ಯ. ರಾಜ್ಯದಲ್ಲಿ ಸರ್ಕಾರವೇ ಇಲ್ಲ, ಸರ್ಕಾರ ಸತ್ತು ಹೋಗಿದೆ.
ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಮುಖ್ಯಮಂತ್ರಿ ಅಲ್ಲೇ ಇದ್ದಾಗ ಕೊಲೆ ಆಗಿದೆ. ಅಂದರೆ ಇಂಟಲಿಜೆನ್ಸ್ ವೈಫಲ್ಯ ಅಲ್ವ ? ಇದು ಸರ್ಕಾರ, ಸಿಎಂ, ಗೃಹ ಸಚಿವರ ವೈಫಲ್ಯ ಅಲ್ವ ? ಜನ ಮನೆಯಿಂದ ಆಚೆ ಬರಲು ಭಯ ಪಡುವ ಸನ್ನಿವೇಶ ನಿರ್ಮಾಣವಾಗಿದೆ.
ಎಂದು ಕಿಡಿಕಾರಿದರು.
ರಾಜ್ಯ ಉತ್ತರ ಪ್ರದೇಶ ಆಗಿಬಿಟ್ಟಿದಿಯಾ ? ಇದನ್ನು ನೀವೇ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದೀರ ? ಎಂದು ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಪ್ರಶ್ನಿಸಿದರು. ಬುಲ್ಡೋಜರ್ ಸರ್ಕಾರದ ಅಗತ್ಯವಿದೆಯಾ? ಯುಪಿ ಮಾದರಿ ರಾಜ್ಯ ಬದಲಾಗಿದೆಯಾ? ಬಿಹಾರ ರಾಜ್ಯದ ರೀತಿ ಆಗಿದೆಯಾ? ಯುಪಿ ರೀತಿ ಆಗಿದೆ ಎಂದು ಒಪ್ಪಿಕೊಂಡಂತೆ ಆಗುತ್ತಿದೆ. ಯುಪಿಯಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ. ಆ ರೀತಿ ರಾಜ್ಯದಲ್ಲೂ ಆಗಿಬಿಡುತ್ತದೆಯೆ? ಮಾತೆತ್ತಿದರೆ ಹಿಂದಿನ ಕಾಲದಲ್ಲಿ ಮಾಡಿದ್ದಾರೆ ಅಂತೀರಾ? ನಮಗೆ ಹೋಲಿಕೆ ಮಾಡಲು ಅಧಿಕಾರಕ್ಕೆ ಬಂದಿದ್ದೀರಾ? ಸಿದ್ದರಾಮಯ್ಯ ಸರ್ಕಾರದ ರೀತಿಯ ಸರ್ಕಾರ ಮಾಡುತ್ತೇವೆ ಅಂತ ಹೇಳಿದ್ರ ? ಜನರಿಗೆ ಆ ರೀತಿ ಭರವಸೆ ನೀಡಿ ಬಂದಿದ್ದೀರಾ ಎಂದು ಪ್ರಶ್ನಿಸಿದರು.
ಅಪರಾಧಿಗಳನ್ನು ಪತ್ತೆ ಹಚ್ಚಿ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಜನರು ಇವರ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರು. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಕಲ್ಲು ಹೊಡೆಯುತ್ತಿದ್ರ ? ಅಂದ್ರೆ ಈಗಿನ ಸರ್ಕಾರಕ್ಕೆ ಕೊಳೆತ ಮೊಟ್ಟೆ, ಚಪ್ಪಲಿಯಲ್ಲಿ ಹೊಡೆಯಬೇಕಾ? ಒಬ್ಬ ಸಂಸದನಾಗಿ ಎಂತಹ ಬೇಜವಾಬ್ದಾರಿ ಹೇಳಿಕೆ ಕೊಡ್ತಾರೆ ನೋಡಿ ಎಂದರು. ತಮ್ಮ ಹೇಳಿಕೆ ಬಳಿಕ ಮನವರಿಕೆ ಮಾಡಿಕೊಂಡ ಮಾಜಿ ಸಿಎಂ ಯಾರೂ ಚಪ್ಪಲಿ ಪದ ಹಾಕಬೇಡಿ ಎಂದು ಹೇಳಿಕೆ ನೀಡಿದ ಕ್ಷಣಗಳ ನಂತರ ತಮ್ಮ ಚಪ್ಪಲಿ ಹೇಳಿಕೆ ಬಳಸಬೇಡಿ ಎಂದು ಮನವಿ ಮಾಡಿದ್ದು, ನಾನು ಆವೇಶದಲ್ಲಿ ಆ ಹೇಳಿಕೆ ನೀಡಿದೆ ಎಂದು ಸಮಜಾಯಿಷಿ ನೀಡಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಜೊತೆಗೆ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮತ್ತಿತರರಿದ್ದರು.