ಬಸವರಾಜ್ ಮತ್ತಿಮೂಡ್ ಹಠಾವೋ ಕಲಬುರಗಿ ಗ್ರಾಮೀಣ ಬಿಜೆಪಿ ಬಚಾವೋ ಚಳುವಳಿ

ಕಲಬುರಗಿ:ಎ.2: ಗ್ರಾಮೀಣ ಮೀಸಲು ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಅವರ ವಿರುದ್ಧ ಸ್ವಪಕ್ಷೀಯರೇ ತಿರುಗಿಬಿದ್ದಿದ್ದಾರೆ. ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆ ಜರುಗುತ್ತಿದ್ದು, ಮತ್ತೊಮ್ಮೆ ಸ್ಪರ್ಧಿಸಲು ಬಸವರಾಜ್ ಮತ್ತಿಮೂಡ್ ಅವರು ಅಣಿಯಾಗುತ್ತಿದ್ದಂತೆಯೇ ಅವರ ವಿರುದ್ಧ ಬಿಜೆಪಿಯ ನಾಯಕರು ಹಾಗೂ ಕಾರ್ಯಕರ್ತರು ಹೋರಾಟ ಆರಂಭಿಸಿದ್ದಾರೆ. ಈ ಸಂಬಂಧ ಭಾನುವಾರ ಬಸವರಾಜ್ ಮತ್ತಿಮೂಡ್ ಹಠಾವೋ, ಗ್ರಾಮೀಣ ಬಿಜೆಪಿ ಬಚಾವೋ ಚಳುವಳಿ ಆರಂಭಿಸಿ, ಸ್ಥಳೀಯ ಆಕಾಂಕ್ಷಿಗಳಿಗೆ ಬಿಜೆಪಿ ಟಿಕೆಟ್ ನೀಡಲು ಪಕ್ಷದ ವರಿಷ್ಠರಿಗೆ ಆಗ್ರಹಿಸಿದ್ದಾರೆ.
ಗ್ರಾಮೀಣ ಮತಕ್ಷೇತ್ರದಲ್ಲಿ ಈಗಿನ ಬಿಜೆಪಿ ಶಾಸಕರು ನಿಷ್ಠಾವಂತ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತುಘಲಕ್ ದರ್ಬಾರ್ ಮಾಡುತ್ತಿದ್ದು, ಬಸವರಾಜ್ ಮತ್ತಿಮೂಡ್ ಅವರಿಗೆ ಟಿಕೆಟ್ ನೀಡಿದರೆ ಪಕ್ಷ ಸೋಲುವುದು ಖಚಿತ ಎಂದು ಪ್ರತಿಭಟನೆಕಾರರು ಕಳವಳ ವ್ಯಕ್ತಪಡಿಸಿದರು.
ಸ್ಥಳೀಯ ಅಭ್ಯರ್ಥಿಗಳಾದ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ್ ಅಷ್ಟಗಿ, ಮುಖಂಡರಾದ ಕಮಲಾಕರ್ ರಾಠೋಡ್, ರಾಜಕುಮಾರ್ ಎಂ. ಚವ್ಹಾಣ್, ಅಂಬಾರಾಯ್ ಬೆಳಕೋಟೆ, ಸೋನುಬಾಯಿ ರಾಠೋಡ್ ಅವರಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ನೀಡಿದಲ್ಲಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು, ಸ್ವಾಭಿಮಾನಿ ಪಡೆ ನೂರಕ್ಕೆ ನೂರರಷ್ಟು ಗೆಲ್ಲಿಸಿಕೊಂಡು ಬರುತ್ತದೆ ಎಂದು ಅವರು ಭರವಸೆ ನೀಡಿದರು.
ಶಾಸಕ ಬಸವರಾಜ್ ಮತ್ತಿಮೂಡ್ ಅವರು ಲಿಂಗಾಯತ ವಿರೋಧಿಯಾಗಿದ್ದಾರೆ. ಇದರ ಜೊತೆಗೆ ದಲಿತ, ಹಿಂದುಳಿದ ವರ್ಗಗಳ ಹಾಗೂ ರೈತರ ವಿರೋಧಿ ಕೂಡ ಆಗಿದ್ದು, ಅವರ ಕಾಲಾವಧಿಯಲ್ಲಿ ಯಾವುದೇ ನೀರಾವರಿ ಯೋಜನೆ ಗ್ರಾಮೀಣ ಮತಕ್ಷೇತ್ರಕ್ಕೆ ತರಲಿಲ್ಲ. ತಮ್ಮ ಶಾಸಕತ್ವದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಬರೀ ಸುಳ್ಳು ಹೇಳಿಕೊಂಡು ತಿರುಗಾಡಿದರು. ಅವರ ಅವಧಿಯಲ್ಲಿ ಸ್ವಜನಪಕ್ಷಪಾತ, ಕುಟುಂಬ ಸದಸ್ಯರ ಹಸ್ತಕ್ಷೇಪ ಮಿತಿಮೀರಿದೆ. ಬಿಜೆಪಿ ಪಕ್ಷದ ವರಿಷ್ಠರಿಗೆ ತಪ್ಪು ಮಾಹಿತಿ ನೀಡಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ತೊಂದರೆ ಕೊಡುವುದು ಮತ್ತು ಸ್ವಾಭಿಮಾನಿ ಕಾರ್ಯಕರ್ತರಿಗೆ ಪೋಲಿಸರಿಂದ ಹೆದರಿಸಿ, ಬೆದರಿಸಿ ಪಕ್ಷದಿಂದ ಉಚ್ಛಾಟಿಸುವುದಾಗಿ ಹೇಳಿ, ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸಿ ಪ್ರತಿ ಬೂತ್‍ನಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಎರಡ್ಮೂರು ಬಣಗಳನ್ನಾಗಿ ವಿಂಗಡಿಸಿ ಪಕ್ಷದ ಸಂಘಟನೆಯನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದರು.
ಬಸವರಾಜ್ ಮತ್ತಿಮೂಡ್ ಅವರಿಗೆ ಟಿಕೆಟ್ ನೀಡಿದರೆ ಗ್ರಾಮೀಣ ಮತಕ್ಷೇತ್ರದಲ್ಲಿ ಪಕ್ಷವು ಹೀನಾಯ ಸೋಲು ಅನುಭವಿಸುವುದು ಶತಸಿದ್ಧವಾಗಿದೆ. ಅವರ ಬದಲಿಗೆ ಸ್ಥಳೀಯ ಆಕಾಂಕ್ಷಿಗಳಿಗೆ ಟಿಕೆಟ್ ನೀಡಿ ಮತ್ತಷ್ಟು ಬಲಿಷ್ಠ ಹಾಗೂ ಸದೃಢ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಮುಖಂಡರಾದ ವೀರುಸ್ವಾಮಿ ನರೋಣಾ, ಧರ್ಮಣ್ಣ ಹುಂಪಳ್ಳಿ ಮರಗುತ್ತಿ, ಶಶಿಧರ್ ಮಾಕಾ, ನಾಗಶೆಟ್ಟಿ ಪಟವಾದ್, ಸತೀಶ್ ಪಾಟೀಲ್ ಅವರಾದ್(ಬಿ), ಗುರುಶಾಂತಪ್ಪಗೌಡ ಹೊಡಲ್, ಚಿದಾನಂದ್ ಪಾಟೀಲ್ ಕಣ್ಣೂರ್, ಶಾಂತಕುಮಾರ್ ಕೊನಗುತ್ತಿ, ವಿಜಯಕುಮಾರ್ ಪವಾರ್ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.