ಬಸವನ ಹುಳು ಕಾಟದಿಂದ ಬೆಳೆ ಹಾನಿಎಕರೆಗೆ 12 ಸಾವಿರ ರೂ. ಪರಿಹಾರಕ್ಕೆ ಬಿ.ಆರ್. ಪಾಟೀಲ್ ಒತ್ತಾಯ

ಕಲಬುರಗಿ ಜು 20: ಮುಂಗಾರು ಅವಧಿಯ ಮೂರು ತಿಂಗಳ ಬೆಳೆಗಳಾದ ಹೆಸರು, ಉದ್ದು ಮತ್ತು ಸೋಯಾ ಬೆಳೆಗೆ ಬಸವನ ಹುಳು ಕಾಟ ಕಾಡುತ್ತಿರುವ ಕಾರಣಕ್ಕಾಗಿ ವ್ಯಾಪಕ ಬೆಳೆ ಹಾನಿ ಸಂಭವಿಸಿದ್ದು, ಕೂಡಲೆ ರೈತರಿಗೆ ಪರಿಹಾರ ಘೋಷಣೆ ಮಾಡಬೇಕೆಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ ಬಿ.ಆರ್.ಪಾಟೀಲ್ ಒತ್ತಾಯಿಸಿದರು.
ಈ ಕುರಿತು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೂಡಲೆ ಕೃಷಿ ಸಚಿವರು ಕಲಬುರಗಿ ಜಿಲ್ಲೆಗೆ ಭೇಟಿ ಕೊಟ್ಟು ಪ್ರತಿ ಎಕರೆಗೆ ರೂ.12 ಸಾವಿರ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಆಳಂದ, ಚಿಂಚೋಳಿ ಮತ್ತು ಕಲಬುರಗಿ ತಾಲೂಕಿನಲ್ಲಿ ರೈತರು ಬಸವನ ಹುಳು ಕಾಟದಿಂದಾಗಿ ವ್ಯಾಪಕ ಹಾನಿಗೆ ಒಳಗಾಗಿದ್ದಾರೆ. ರೈತರು ಇಷ್ಟೆಲ್ಲಾ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೂ ಕೃಷಿ ಇಲಾಖೆಯ ಅಧಿಕಾರಿಗಳು ಇನ್ನೂ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಲೆ ಕೆಡಿಸಿಕೊಂಡಿಲ್ಲ. ರೈತರಿಗೆ ಪರಿಹಾರ ಸೂಚಿಸಬೇಕಾದ ಕೃಷಿ ಅಧಿಕಾರಿಗಳು ಕೇವಲ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಪಾಟೀಲ್ ಬೇಸರ ವ್ಯಕ್ತಪಡಿಸಿದರು.
ಬಸವನ ಹುಳುವಿನ ಕಾಟದಿಂದಾಗಿ ಆಳಂದ ಮತ್ತು ಚಿಂಚೋಳಿ ತಾಲೂಕಿನಲ್ಲಿ ಸುಮಾರು 6000 ಎಕರೆ ಜಮೀನಿನಲ್ಲಿ ಬೆಳೆದು ನಿಂತಿದ್ದ ಸೋಯಾ, ಉದ್ದು, ಹೆಸರು ಬೆಳೆ ಹಾಳಾಗಿದೆ. ಇಂಥದ್ದೇ ಸ್ಥಿತಿ ಕಮಲಾಪುರ ಮತ್ತು ಕಲಬುರಗಿ ತಾಲೂಕಿನಲ್ಲಿಯೂ ಕಾಣಿಸಿಕೊಂಡಿದೆ. ಹಾಗಾಗಿ, ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ತಕ್ಷಣ ಸಮಸ್ಯೆ ಸ್ಪಂದಿಸಬೇಕೆಂದು ಪಾಟೀಲ್ ತಾಕೀತು ಮಾಡಿದರು.
ಉಸ್ತುವಾರಿ ಸಚಿವರ ನಿರ್ಲಕ್ಷ್ಯ:
ಕಲಬುರಗಿ ಜಿಲ್ಲೆಯಲ್ಲಿ ರೈತರು ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಕೃಷಿ ಅಧಿಕಾರಿಗಳ ಸಭೆ ನಡೆಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಆಳಂದ ಕ್ಷೇತ್ರದ ಶಾಸಕರು ಈ ಕುರಿತು ಸೌಜನ್ಯಕ್ಕೂ ಪರಿಶೀಲನೆ ನಡೆಸಿಲ್ಲ. ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ಸರಕಾರವನ್ನು ಎಂದೂ ನೋಡಿಲ್ಲ ಎಂದರು.
ತೊಗರಿಗೆ ಮಾತ್ರ ಬೆಳೆ ವಿಮೆಯ ಅನುಕೂಲವಿದೆ. ಸೋಯಾ, ಉದ್ದು ಮತ್ತು ಹೆಸರಿಗೆ ಈ ಯೋಜನೆ ಅನ್ವಯ ಆಗುವುದಿಲ್ಲ. ಹಾಗಾಗಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಎಂಬುದು ನಿಷ್ಕ್ರಿಯ ಮತ್ತು ಭೋಗಸ್ ಯೋಜನೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ ಭಂಕೂರ್, ಗಣೇಶ್ ಪಾಟೀಲ್, ರೈತರಾದ ಅಣವೀರಪ್ಪ ಬೆಳ್ಳಿ ತಡಕಲ್ ಸೇರಿದಂತೆ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.


ಕಲೆಕ್ಷನ್ ಕೌಂಟರ್ ಬಂದ್ ಮಾಡಿ
ರಾಜ್ಯದ ಕೃಷಿ ಖಾತೆ ಸಚಿವರು ಕಲಬುರಗಿ ಜಿಲ್ಲೆಯ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಅವರು ಜಿಲ್ಲೆಯ ಪ್ರವಾಸ ಕೈಗೊಳ್ಳದೆ ಕೇವಲ ಕಲೆಕ್ಷನ್ ಗೆ ಸೀಮಿತರಾಗಿದ್ದಾರೆ. ಇನ್ನಾದರೂ ತಮ್ಮ ಕಲೆಕ್ಷನ್ ಕೌಂಟರ್ ಬಂದ್ ಮಾಡಿ ಜಿಲ್ಲೆಯ ರೈತರ ಸಮಸ್ಯೆಗೆ ಸ್ಪಂದಿಸದೆ ಹೋದರೆ ಜಿಲ್ಲೆಯ ರೈತರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಹಿರಿಯ ಮುತ್ಸದ್ಧಿ ಬಿ.ಆರ್.ಪಾಟೀಲ್ ಎಚ್ಚರಿಕೆ ನೀಡಿದರು.


ಸಮೀಕ್ಷೆ ಕೈಗೊಳ್ಳಿ
ಕಲಬುರಗಿ, ಆಳಂದ, ಚಿಂಚೋಳಿ ಮತ್ತು ಕಮಲಾಪುರ ತಾಲೂಕಿನ ರೈತರು ಬಸವನಹುಳು ಕಾಟದಿಂದ ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಹಾಗಾಗಿ, ಕೂಡಲೆ ಜಿಲ್ಲಾಧಿಕಾರಿ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಬೆಳೆ ಹಾನಿ ಸಮೀಕ್ಷೆ ಕೈಗೊಂಡು, ಪ್ರಸ್ತುತ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಕಂಡು ಹಿಡಿಯಬೇಕೆಂದು ಕಲಬುರಗಿ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಸುಭಾಷ್ ಗುತ್ತೇದಾರ್ ಸಲಹೆ ನೀಡಿದರು.
ಇದರ ಜೊತೆಗೆ, ರಾಯಚೂರು, ಧಾರವಾಡ ಮತ್ತು ವಿಜಯಪುರ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿಗಳು ಬಸವನ ಹುಳು ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಕಂಡುಹಿಡಿಯಲು ಕೂಡಲೆ ಕಲಬುರಗಿ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಳ್ಳಬೇಕೆಂದು ರಾಠೋಡ್ ತಾಕೀತು ಮಾಡಿದರು.