ಬಸವನ ಬಾಗೇವಾಡಿಯಲ್ಲಿ ಬಿಎಲ್‍ಡಿಇ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ

ವಿಜಯಪುರ, ಫೆ. 26: ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ. ಬಿ. ಎಂ. ಪಾಟೀಲ ಮೆಡಿಕಲ್‍ಕಾಲೇಜ್, ಮುಂಬೈ ಸ್ಪೈನ್ ಫೌಂಡೇಶನ್ ಹಾಗೂ ಬಸವನ ಬಾಗೇವಾಡಿ ಪಿ.ಕೆ.ಪಿ.ಎಸ್. ಸಂಯುಕ್ತಾಶ್ರ್ಯದಲ್ಲಿ ಬೆನ್ನು ಹುರಿ ರೋಗದ ತಪಾಸಣೆ, ಅರಿವು ಹಾಗೂ ಚಿಕಿತ್ಸಾ ಶಿಬಿರ ಶುಕ್ರವಾರ ಬಸವನ ಬಾಗೇವಾಡಿಯಲ್ಲಿ ನಡೆಯಿತು.
ಬಸವನ ಬಾಗೇವಾಡಿ ಪಟ್ಟಣದಯಾತ್ರಿ ನಿವಾಸದಲ್ಲಿ ಆಯೋಜಿಸಲಾಗಿದ್ದ ಈ ಶಿಬಿರವನ್ನು ಪಿ.ಕೆ.ಪಿ.ಎಸ್. ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಉದ್ಘಾಟಿಸಿ ಮಾತನಾಡಿ, ಬೆನ್ನುಹುರಿ ಚಿಕಿತ್ಸಾ ತಜ್ಞರು ಬಸವನ ಬಾಗೇವಾಡಿಗೆ ಬಂದು ರೋಗಿಗಳನ್ನು ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ನೀಡುತ್ತಿರುವುದರಿಂದ ಬಡ ರೋಗಿಗಳಿಗೆ ಬಹಳಷ್ಟು ಅನುಕೂಲವಾಗುತ್ತಿದೆ ಎಂದು ಹೇಳಿದರು.
ಎಲುಬು, ಕೀಲು, ಬೆನ್ನೆಲುಬು, ನರಗಳ ಖ್ಯಾತ ಶಸ್ತ್ರಚಿಕಿತ್ಸಕ ಡಾ. ರವಿಕುಮಾರ ಬಿರಾದಾರ ಮಾತನಾಡಿ, ಬೆನ್ನುಹುರಿ ರೋಗದ ಬಗ್ಗೆ ಸಮಸ್ಯೆ, ಮುನ್ನೆಚ್ಚರಿಕೆ, ಹಾಗೂ ಚಿಕಿತ್ಸಾ ವಿಧಾನಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಡಾ. ಶರಣ ಹೊನ್ನಗೋಳ ಸೇರಿದಂತೆ ತಜ್ಞ ವೈದ್ಯರು ಈ ಶಿಬಿರಕ್ಕೆ ಆಗಮಿಸಿದ ಸುಮಾರು 200 ರೋಗಿಗಳ ಆರೋಗ್ಯ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ನೀಡಿದರು.