ಬಸವನಹುಳು ಹಾವಳಿಗೆ ಹಾಳಾದ ರೈತರ ಫಸಲು- ಎಕರೆಗೆ 15 ಸಾ.ರೂ. ಪರಿಹಾರ ನೀಡಲು ಹಣಮಂತರಾವ ಭೂಸನೂರ್ ಆಗ್ರಹ

ಕಲಬುರಗಿ:ಜು.23:ಶಂಖ ಬಸವನಹುಳು ಹಾವಳಿಗೆ ಕಲಬುರಗಿ ಜಿಲ್ಲೆಯ ಆಳಂದ, ಅಫಜಲ್ಪುರ, ಚಿಂಚೋಳಿ ಸೇರಿದಂತೆ ಹಲವು ತಾಲೂಕುಗಳ ರೈತರು ಕಂಲಾಗಾಗಿದ್ದಾರೆ, ಇವರು ಬಿತ್ತಿರುವ ಮುಂಗಾರು ಅವಧಿಯ ಮೂರು ತಿಂಗಳ ಬೆಳೆಗಳಾದ ಹೆಸರು, ಉದ್ದು ಮತ್ತು ಸೋಯಾಬೀನ್ ಬೆಳೆಯನ್ನೇ ಬಸವನ ಹುಳು ತಿಂದು ಖಾಲಿ ಮಾಡಿದೆ. ಇರಿಂದ ರೈತರಿಗೆ ಆಗಿರುವ ಹಾನಿ ಅಪಾರ. ತಕ್ಷಣ ಸಮೀಕ್ಷೆ ಕೈಗೊಂಡು ರೈತರ ಹಾಳಾದ ಪ್ರತಿ ಎಕರೆಗೆ 15 ಸಾವಿರ ರುಪಾಯಿಯಂತೆ ಈ ಕೂಡಲೇ ಪರಿಹಾರ ಘೋಷಿಸಬೇಕು ಎಂದು ಪ್ರಗತಿಪರ ರೈತ, ಕಾಂಗ್ರೆಸ್ ಮುಖಂಡ ಹಣಮಂತರಾವ ಭೂಸನೂರ್ ಆಗ್ರಹಿಸಿದ್ದಾರೆ.

ಶುಕ್ರವಾರ ಆಳಂದ ತಾಲೂಕಿನ ಧುತ್ತರಗಾಂವ್, ಕಡಗಂಚಿ, ಕಿಣ್ಣಿ ಸುಲ್ತಾನ್, ಕೊಡಲ ಹಂಗರಗಾ ಸೇರಿದಂತೆ ಬಸವನಹುಳು ಬಾಧೆಯಿಂದ ಪೀಡಿತವಾಗಿರುವ ಗ್ರಾಮಗಳ ರೈತರ ಹೊಲಗದ್ದೆಗಳಿಗೆ ಭೇಟಿ ನೀಡಿ ಬಸವನಹುಳು ಅದ್ಹೇಗೆ ಫಲು ತಿಂದು ಹಾಕಿದೆ ಎಂಬುದನ್ನು ಖುದ್ದು ಪರಿಶೀಲಿಸಿ ರೈತರೊಂದಿಗೆ ಮಾತನಾಡಿದರು. ಸೋಯಾಬೀನ್ ಸೇರಿದಂತೆ ಉದ್ದು, ಹೆಸರು ಪ್ರತಿ ಎಕರೆಗೆ ರೈತ ಕನಿಷ್ಠ 10 ರಿಂದ 12 ಸಾವಿರ ರುಪಾಯಿ ವೆಚ್ಚ ಮಾಡಿದ್ದಾನೆ. ಬಿತ್ತಿದ ಫಸಲು ಹೀಗೆ ಹಾಳಾದರೆ ರೈತರು ಸಾಲಸೋಲ ಮಾಡಿಕೊಂಡು ತೊಂದರೆಗೊಳಗಾಗೋದು ನಿಶ್ಚಿತ. ಈ ಹಂತದಲ್ಲಿ ಸರ್ಕಾರ ತಕ್ಷಣ ರೈತರಿಗೆ ನೆರವಿಗೆ ಬರಲಿ ಎಂದು ಆಗ್ರಹಿಸಿದ್ದಾರೆ.

ತಕ್ಷಣ ಕೃಷಿ ಸಚಿವರು ಬಿಸಿ ಪಾಟೀಲ್, ಜಿಲ್ಲಾ ಸಚಿವ ಮುರುಗೇಶ ನಿರಾಣಿ ಹುಳು ಪೀಡಾತ ಹೊಲಗಳಿಗೆ ಭೇಟಿ ನೀಡಲಿ, ಜಿಲ್ಲಾಡಳಿತ, ಕೃ,ಇ ಇಲಾಖೆ ಸಹ ಬೇಟಿ ನೀಡಿ ಸಮೀಕ್ಷೆ ಮಾಡಲಿ. ರೈತರ ಹಾನಿಯಾದ ಫಸಲಿಗೆ ಪರಿಹಾರ ನೀಡಲಿ. ಯಾರೂ ಇಂದಿಗೂ ರೈತರ ಹೊಲಗಳಿಗೆ ಭೇಟಿ ನೀಡಿಲ್ಲ. ಇದು ಬಿಜೆಪಿ ಸರ್ಕಾರದ ರೈತ ವಿರೋಧಿ ಧೋರಣೆಗೆ ಕನ್ನಡಿ. ಆಳಂದ ಮತ್ತು ಚಿಂಚೋಳಿ ತಾಲೂಕಿನಲ್ಲಿ ಸುಮಾರು 7, 000 ಎಕರೆ ಜಮೀನಿನಲ್ಲಿ ಬೆಳೆದು ನಿಂತಿದ್ದ ಸೋಯಾ, ಉದ್ದು, ಹೆಸರು ಬೆಳೆ ಹಾಳಾಗಿದೆ. ಇಂಥದ ಸ್ಥಿತಿ ಕಮಲಾಪುರ ಮತ್ತು ಕಲಬುರಗಿ ತಾಲೂಕಿನಲ್ಲಿಯೂ ಕಾಣಿಸಿಕೊಂಡಿದೆ. ಪರಿಸ್ಥಿತಿ ಗಂಭೀರವಾಗಿದ್ದೂರ ಯಾರೊಬ್ಬರೂ ರೈತರ ನೋವಿಗೆ ಸ್ಪಂದಿಸುತ್ತಿಲ್ಲವೆಂದು ಭೂಸನೂರ್ ಜಿಲ್ಲಾಡಳಿತ, ಸರ್ಕಾರದ ಧೋರಣೆ ಖಂಡಿಸಿದ್ದಾರೆ.